ನ. 26, 27ರಂದು ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಸಮ್ಮೇಳನ

ಕಲಬುರಗಿ,ನ.23: ನಗರದ ಶಹಾಬಾದ್ ವರ್ತುಲ ರಸ್ತೆಯಲ್ಲಿರುವ ಕೋಸಗಿ ಕಲ್ಯಾಣ ಮಂಟಪದಲ್ಲಿ ಇದೇ ನವೆಂಬರ್ 26 ಮತ್ತು 27ರಂದು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್‍ಸಿಸ್ಟ್) ಪಕ್ಷದ ಜಿಲ್ಲಾ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಶರಣಬಸಪ್ಪ ಮಮಶೆಟ್ಟಿ ಅವರು ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಲೆ ಏರಿಕೆ ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನವಿರೋಧಿ, ರೈತ ವಿರೋಧಿ ನೀತಿಗಳ ಕುರಿತು ಸಮಾವೇಶದಲ್ಲಿ ಚರ್ಚಿಸಲಾಗುತ್ತದೆ ಎಂದರು.
ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಯಲ್ಲಿ ವೈಫಲ್ಯ, ಅತಿವೃಷ್ಟಿ ಪರಿಹಾರ, ಜವಳಿ ಪಾರ್ಕ್, ಏಮ್ಸ್ ಆಸ್ಪತ್ರೆ, ರೈಲ್ವೆ ವಿಭಾಗೀಯ ಕಚೇರಿ, ತೊಗರಿ ಹೈಟೆಕ್ ಪಾರ್ಕ್ ಮುಂತಾದ ಬೇಡಿಕೆಗಳನ್ನೂ ಸಹ ಮಂಡಿಸಲಾಗುತ್ತದೆ ಎಂದು ಅವರು ತಿಳಿಸಿದರು.
ಸಮಾವೇಶವನ್ನು ಕೇರಳ್ ರಾಜ್ಯದ ಮಾಜಿ ಶಿಕ್ಷಣ ಸಚಿವ ಹಾಗೂ ಸಿಪಿಐನ ಪಾಲಿಟ್ ಬ್ಯುರೋ ಸದಸ್ಯ ಎಂ.ಎ. ಬೇಬಿ ಅವರು ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ರಾಜ್ಯ ಸಮಿತಿ ಕಾರ್ಯದರ್ಶಿ ಯು. ಬಸವರಾಜ್, ರಾಜ್ಯ ಕೇಂದ್ರ ಸದಸ್ಯ ಕಾ. ನಿತ್ಯಾನಂದ್ ಸ್ವಾಮಿ, ಕಾ. ಎಸ್. ವರಲಕ್ಷ್ಮೀ, ಡಾ. ಪ್ರಭು ಖಾನಾಪುರೆ ಅವರು ಆಗಮಿಸುವರು ಎಂದು ಅವರು ಹೇಳಿದರು.
ಹೋರಾಟಗಾರ್ತಿ ಶ್ರೀಮತಿ ಕೆ. ನೀಲಾ ಅವರು ಮಾತನಾಡಿ, ಕರ್ನಾಟಕದಲ್ಲಿ ಜಾನುವಾರು ಹತ್ಯೆ ವಿರೋಧಿ ಕಾನೂನು, ವಿದ್ಯುತ್ ವಿತರಣಾ ಕಾಯ್ದೆ ಸೇರಿದಂತೆ ದೀನ, ದಲಿತರ, ರೈತ ವಿರೋಧಿ ನೀತಿಗಳನ್ನು ಹಿಂದಕ್ಕೆ ಪಡೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಡಾ. ಪ್ರಭು ಖಾನಾಪುರೆ, ವಿರುಪಾಕ್ಷಪ್ಪ ತಡಕಲ್, ಮೇಘರಾಜ್ ಕಠಾರೆ, ಭೀಮಶೆಟ್ಟಿ ಯಂಪಳ್ಳಿ, ಶ್ರೀಮಂತ್ ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು.