ನ 26 ರ ಅಖಿಲ ಭಾರತ ಮುಷ್ಕರಕ್ಕೆ ಎಐಡಿಎಸ್‍ಒ ಬೆಂಬಲ

ಬಳ್ಳಾರಿ ನ 20 : ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ಖಾಯಿದೆಗಳು ಹಾಗೂ ರೈತ ವಿರೋಧಿ ಖಾಯಿದೆಗಳನ್ನು ವಿರೋಧಿಸಿ ಕಾರ್ಮಿಕ ಹಾಗೂ ರೈತ ಸಂಘಟನೆಗಳು ನವೆಂಬರ್ 26 ರಂದು ಕರೆ ನೀಡಿರುವ ಅಖಿಲ ಭಾರತ ಮುಷ್ಕರಕ್ಕೆ ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆಯು ಬೆಂಬಲ ವ್ಯಕ್ತಪಡಿಸುತ್ತದೆ ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ಸುರೇಶ್ ಜಿಲ್ಲಾ ಕಾರ್ಯದರ್ಶಿ ರವಿಕಿರಣ್.ಜೆ.ಪಿ ತಿಳಿಸಿದ್ದಾರೆ .
ಈ ಕುರಿತಂತೆ ಪತ್ರಿಕಾ ಪ್ರಕಟಣೆ ನೀಡಿದ್ದು, ಶಿಕ್ಷಣ ವಿರೋಧಿ, ಖಾಸಗೀಕರಣ, ವ್ಯಾಪಾರೀಕರಣ, ಕೋಮುವಾದೀಕರಣಕ್ಕೆ ಉತ್ತೇಜನ ನೀಡುವ ಹೊಸ ಶಿಕ್ಷಣ ನೀತಿಯನ್ನು ವಿರೋಧಿಸಿ ಶಿಕ್ಷಣ ತಜ್ಞರು, ಶಿಕ್ಷರು, ಪೋಷಕರು, ವಿದ್ಯಾರ್ಥಿಗಳು ಮುಷ್ಕರದಲ್ಲಿ ಪಾಲ್ಗೊಳ್ಳಬೇಕೆಂದು ಕೋರಿದ್ದಾರೆ

ಹೊಸ ಶಿಕ್ಷಣ ನೀತಿ ತಿರಸ್ಕರಿಸಿ :
ಅನೇಕ ಶಿಕ್ಷಣ ತಜ್ಞರು, ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳ ವಿರೋಧದ ನಡುವೆಯೇ ಕೇಂದ್ರ ಸರ್ಕಾರವು ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದೆ. ಅತ್ಯಂತ ಅಪ್ರಜಾತಾಂತ್ರಿಕವಾಗಿ ಹೊಸ ಶಿಕ್ಷಣ ನೀತಿಯನ್ನು ಇಡೀ ದೇಶದ ಜನತೆಯ ಮೇಲೆ ಹೇರಲಾಗಿದೆ.
ಈ ನೀತಿಯ ಮೂಲಕ ದೊಡ್ಡ ಉದ್ಯಮಪತಿಗಳಿಗೆ, ಕಾಪೆರ್ರೇಟ್ ಮನೆತನಗಳಿಗೆ ಶಿಕ್ಷಣದಲ್ಲಿ ಬಂಡವಾಳ ಹೂಡಿ ಮತ್ತಷ್ಟು ಲಾಭ ಮಾಡಿಕೊಳ್ಳಲು ಅನುವು ಮಾಡಿಕೊಡಲಿದೆ.
ಹೊಸ ಶಿಕ್ಷಣ ನೀತಿಯನ್ನು ವಿರೋಧಿಸಿ ಎಐಡಿಎಸ್ಓ ಸಂಘಟಿಸಿದ್ದ ಸಹಿಸಂಗ್ರಹದಲ್ಲಿ ಇಡೀ ದೇಶದಾದ್ಯಂತ ಲಕ್ಷಾಂತರ ಸಹಿಗಳು ಸಂಗ್ರಹವಾಗಿವೆ. ದೇಶದ ಅನೇಕ ಶಿಕ್ಷಣ ತಜ್ಞರು, ಶಿಕ್ಷಕರು, ವಿದ್ಯಾರ್ಥಿಗಳು ತಮ್ಮ ಸಹಿ ನೀಡುವುದರ ಮೂಲಕ ಹೊಸ ಶಿಕ್ಷಣ ನೀತಿ-2020 ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿಯು ಸಾವಿರಾರು ಸಹಿಗಳು ಸಂಗ್ರಹವಾಗಿವೆ.
ಈ ಎಲ್ಲಾ ಸಹಿಯನ್ನೊಳಗೊಂಡ ಮನವಿ ಪತ್ರವನ್ನು ನವೆಂಬರ್ 23ರಂದು ಭಾರತದ ರಾಷ್ಟ್ರಪತಿಗಳಿಗೆ ಹಾಗೂ ಎಲ್ಲಾ ರಾಜ್ಯಗಳ ರಾಜ್ಯಪಾಲರಿಗೆ ನೀಡಲಾಗುವುದು ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ಸುರೇಶ್ ಜಿಲ್ಲಾ ಕಾರ್ಯದರ್ಶಿ ರವಿಕಿರಣ್.ಜೆ.ಪಿ ತಿಳಿಸಿದ್ದಾರೆ