ನ.26 ರಿಂದ ಸಂಯುಕ್ತ ಕಿಸಾನ್ ಮೋರ್ಚಾ ಧರಣಿ

ಗುಬ್ಬಿ, ನ. ೨೫- ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳನ್ನು ಹಿಮ್ಮೆಟಿಸಲು ರಾಜ್ಯ ಸರ್ಕಾರ ಜಾರಿಗೆ ತಂದಿದ್ದ ರೈತ, ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ರದ್ದುಗೊಳಿಸಿ ಜನಪರ ನೀತಿಗಳನ್ನು ಜಾರಿ ಮಾಡುವಂತೆ ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನ. ೨೬ ರಿಂದ ೨೮ ರವರೆಗೆ ಸಂಯುಕ್ತ ಕಿಸಾನ್ ಮೋರ್ಚಾ ವತಿಯಿಂದ ಮಹಾಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಅದ್ಯಕ್ಷ ವೆಂಕಟೇಗೌಡ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೆಹಲಿಯಲ್ಲಿ ಸತತ ೧೩ ತಿಂಗಳ ಕಾಲ ರೈತರು ಐತಿಹಾಸಿಕ ಹೋರಾಟ ನಡೆಸಿದ ಪರಿಣಾಮ ಮೋದಿ ಸರ್ಕಾರ ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಿತು. ಆದರೂ ಕನಿಷ್ಠ ಬೆಂಬಲ ಬೆಲೆ ಕಾಯ್ದೆ ಜಾರಿ ಮತ್ತು ವಿದ್ಯುತ್ ತಿದ್ದುಪಡಿ ಮಸೂದೆ ಮುಂತಾದ ವಿಷಯಗಳಲ್ಲಿ ರೈತರಿಗೆ ನೀಡಿದ ಲಿಖಿತ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದು ದೂರಿದರು.
ಸರ್ಕಾರದ ಈ ಧೋರಣೆಗಳು ರೈತಾಪಿ ವರ್ಗವನ್ನು ಸಾಲದ ಸುಲಿಗೆ ಸಿಲುಕಿಸಿ ಕೃಷಿಯಿಂದ ಹೊರದೊಡಲಾಗುತ್ತಿದೆ. ಕೃಷಿ ಆರ್ಥಿಕ ಬಿಕಟ್ಟಿನಲ್ಲಿ ಸಾಗುತ್ತಿದೆ. ಹಾಗಾಗಿ ನಮ್ಮ ದೇಶದ ಸಂಪತ್ತನ್ನು ಸಂರಕ್ಷಿಸಿ ಜನರ ಬದುಕು ಉಳಿಸಲು ಜನಪರ ನೀತಿಗಳಿಗಾಗಿ ಕೇಂದ್ರ ಸರ್ಕಾರವನ್ನು ಆಗ್ರಹಿಸಿ ನ.೨೬ ರಿಂದ ೨೮ ರವರೆಗೆ ಮೂರು ದಿನಗಳವರೆಗೆ ದೇಶಾದ್ಯಂತ ಎಲ್ಲ ರಾಜಭವನಗಳ ಮುಂದೆ ಸಂಯುಕ್ತ ಕಿಸನ್ ಮೋರ್ಚಾ, ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ನೇತೃತ್ವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿ ಮಹಾಧರಣಿ ನಡೆಸಲಾಗುವುದು. ಇದರ ಭಾಗವಾಗಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ೭೨ ಗಂಟೆಗಳ ಮಹಾ ಧರಣಿ ಹಮ್ಮಿಕೊಳ್ಳಲಾಗಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಹಾಧರಣಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ರೈತ ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಲೋಕೇಶ್, ಶಿವಕುಮಾರ್, ಯತೀಶ್, ಜಗದೀಶ್, ಶಿವಣ್ಣ, ಮಹದೇವು, ಬಸವರಾಜು ಸೇರಿದಂತೆ ತಾಲ್ಲೂಕಿನ ರೈತರು ಉಪಸ್ಥಿತರಿದ್ದರು.