ನ.26 ರಂದು ಕಾರ್ಮಿಕ ಸಂಘಟನೆಗಳಿಂದ ಅಖಿಲ ಭಾರತ ಮುಷ್ಕರ

ಮೈಸೂರು, ನ.21: ನ.26 ರಂದು ಕಾರ್ಮಿಕ ಸಂಘಟನೆಗಳ ವತಿಯಿಂದ ಅಖಿಲ ಭಾರತ ಮುಷ್ಕರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೆಚ್ ಆರ್ ಶೇಷಾದ್ರಿ ತಿಳಿಸಿದರು.
ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೊರೋನಾ ಸಾಂಕ್ರಾಮಿಕ ರೋಗದಿಂದ ದೇಶದಲ್ಲಿ ಅನಿರೀಕ್ಷಿತವಾಗಿ ಲಾಕ್ ಡೌನ್ ಆಯಿತು . ಮೊದಲೇ ಸಂಕಷ್ಟದಲ್ಲಿರುವ ಕಾರ್ಮಿಕರ ಹಿತವನ್ನು ಕಾಪಾಡುವ ಬದಲಿಗೆ ಮತ್ತಷ್ಟು ಸಂಕಷ್ಟಕ್ಕೆ ನೂಕಲಾಯಿತು . ದೇಶದ ಆರ್ಥಿಕ ಸಾರ್ವಭೌಮತೆಗೆ ಧಕ್ಕೆ ತರುವ ಹಾಗೂ ಅನ್ನದಾತ ರೈತ , ಸಂಪತ್ತನ್ನು ಸೃಷ್ಟಿಸುವ ಶ್ರಮಿಕನನ್ನು ಪೂರ್ಣ ಗುಲಾಮಗಿರಿಗೆ ತಳ್ಳುವ ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆಯ ವಿರುದ್ಧ ಎಲ್ಲ ದೇಶ ಪ್ರೇಮಿ ಕಾರ್ಮಿಕ ಸಂಘಟನೆಗಳು , ಸ್ವತಂತ್ರ ಸಂಘಟನೆಗಳು ಎಲ್‍ಐಸಿ , ಬ್ಯಾಂಕ್ , ರಕ್ಷಣಾ ವಲಯ , ರೈಲ್ವೆ , ಬಿಎಸ್‍ಎನ್‍ಎಲ್ , ರಾಜ್ಯ ಮತ್ತು ಕೇಂದ್ರ ಸೇವೆ ಮುಂತಾದ ಅಖಿಲ ಭಾರತ ಸಂಘಟನೆಗಳು , ಕಾರ್ಮಿಕರು , ನೌಕರರು ಅಸಂಘಟಿತ ಕ್ಷೇತ್ರದ ಕಾರ್ಮಿಕರಾದ ಕಟ್ಟಡ , ಹಮಾಲಿ , ಬೀಡಿ , ತೋಟಗಾರಿಕೆ , ಗುತ್ತಿಗೆ ಕಾರ್ಮಿಕರು , ಪಂಚಾಯ್ತಿ ನೌಕರರು , ಬೀದಿ ಬದಿ ವ್ಯಾಪಾರಸ್ಥರು , ಮನೆಕೆಲಸಗಾರರು , ಆಟೋ , ಟ್ಯಾಕ್ಸಿ , ಸಾರಿಗೆಯಲ್ಲಿ ಕಾರ್ಯನಿರ್ವಹಿಸುವ ನೌಕರರು , ಅಂಗನವಾಡಿ , ಬಿಸಿಯೂಟ , ಆಶಾ , ನೌಕರರು ಮತ್ತು ವಿದ್ಯಾರ್ಥಿ , ಯುವಜನ , ಮಹಿಳಾ , ರೈತ ಸಂಘಟನೆಗಳು ಜೊತೆಗೂಡಿ ಭಾರತದ ಸಂವಿಧಾನದ ಸಂಸ್ಥಾಪನ ದಿನವಾದ ನವೆಂಬರ್ 26 ರಂದು ಸಂವಿಧಾನಿಕ ಹಕ್ಕುಗಳಿಗಾಗಿ ಪ್ರತಿರೋಧವನ್ನು ವ್ಯಕ್ತ ಪಡಿಸಲಿದ್ದಾರೆ ಎಂದರು.
ಕಾರ್ಮಿಕರನ್ನು ಗುಲಾಮರನ್ನಾಗಿಸುವ ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಿರಿ . ಕಾನೂನುಗಳು ಸೇರಿ ವೇತನ ಸಂಹಿತೆ , 9 ಕಾನೂನುಗಳು ಸೇರಿ ಸಾಮಾಜಿಕ ಸುರಕ್ಷಾ ಕಾಯ್ದೆ , 13 ಕಾನೂನುಗಳು ಸೇರಿ ಉದ್ಯೋಗ, ಸುರಕ್ಷೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿ ಸಂಹಿತೆ , 3 ಕಾನೂನುಗಳು ಸೇರಿ ಔದ್ಯೋಗಿಕ ಸಂಬಂಧ ಸಂಹಿತೆಗಳನ್ನು ಜಾರಿಗೊಳಿಸಿವೆ .ತಾಂತ್ರಿಕ ಬೆಳವಣಿಗೆಯಿಂದ ಕೆಲಸಗಾರರ ಉತ್ಪಾದನಾ ಸಾಮಥ್ರ್ಯ ಹೆಚ್ಚಿದ್ದರೂ ಕೂಡಾ ಕಾರ್ಖಾನೆಗಳನ್ನು ಮುಚ್ಚಲು 100 ಮಿತಿಯನ್ನು 300 ಕ್ಕೇರಿಸಿದೆ ಎಂದರು.
ರಾಜ್ಯದಲ್ಲಿರುವ ಎಲ್ಲಾ ಪ್ರಮುಖ ರೈತ ಸಂಘಟನೆಗಳು ನ.26 ರಂದು ನಡೆಯುವ ಮುಷ್ಕರವನ್ನು ಬೆಂಬಲಿಸಿ ಭಾಗವಹಿಸುತ್ತಿದ್ದಾರೆ . ಅದೇ ರೀತಿ ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರದಲ್ಲಿ ಸಾಮಾಜಿಕ ನ್ಯಾಯದ ಮೀಸಲಾತಿಯ ಪರಿಣಾಮಕಾರಿ ಅನುಷ್ಠಾನಕ್ಕೆ ಒತ್ತಾಯಿಸಿ ಹಲವಾರು ದಲಿತ ಸಂಘಟನೆಗಳೂ ಮುಷ್ಕರವನ್ನು ಬೆಂಬಲಿಸಿ ಭಾಗವಹಿಸುತ್ತಿದ್ದಾರೆ . ಒಟ್ಟಾರೆಯಾಗಿ ರಾಜ್ಯ ಸರ್ಕಾರಕ್ಕೂ ನ.26 ರ ಈ ಮುಷ್ಕರ ಒಂದು ಎಚ್ಚರಿಕೆಯ ಗಂಟೆಯಾಗಲಿದೆ ಎಂದು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯು ಎಚ್ಚರಿಸಿದೆ.
ಸುದ್ದಿಗೋಷ್ಠಿಯಲ್ಲಿ ಜಯರಾಮ್, ಚಂದ್ರಶೇಖರ್ ಮೇಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.