ನ.26ರಂದು ರಾಷ್ಟ್ರೀಯ ಹೆದ್ದಾರಿ ತಡೆ

ಮೈಸೂರು,ನ.23:- ಚಾರಿತ್ರಿಕ ದೆಹಲಿ ರೈತ ಆಂದೋಲನಕ್ಕೆ ಒಂದು ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಗಳನ್ನು ವಿರೋಧಿಸಿ ನವೆಂಬರ್ 26ರಂದು ಸಂಯುಕ್ತ ಹೋರಾಟ ಕರ್ನಾಟಕ (ರೈತ, ದಲಿತ, ಕಾರ್ಮಿಕ, ಮಹಿಳಾ, ವಿದ್ಯಾರ್ಥಿ ಯುವಜನ, ಕನ್ನಡಪರ ಸಂಘಟನೆಗಳ ಸಮನ್ವಯ ಸಮಿತಿ)ವತಿಯಿಂದ ಹಸು, ಎತ್ತು, ಎಮ್ಮೆ, ಕುರಿ, ಕೋಳಿ, ಎತ್ತಿನ ಗಾಡಿ, ಟ್ರಾಕ್ಟರ್ ಗಳನ್ನು ರಸ್ತೆಗೆ ಇಳಿಸಿ ಶ್ರೀರಂಗಪಟ್ಟಣ ಕಿರಂಗೂರು ಸರ್ಕಲ್ ಬಳಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಲಾಗುವುದು ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.
ಮೈಸೂರು ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾನೂನಾಗಬೇಕು. ಕಾರ್ಮಿಕ ಸಂಹಿತೆಗಳು ರದ್ದಾಗಬೇಕು. ರಾಜ್ಯ ಸರ್ಕಾರದ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ಜಾನುವಾರು ಹತ್ಯೆ ನಿಷೇಧ ಕಾಯ್ದೆ 2020 ತಿದ್ದುಪಡಿಗಳು ರದ್ದಾಗಬೇಕು. ಬಗರ್ ಹುಕುಂ ಸಾಗುವಳಿದಾರರಿಗೆ ದರಖಾಸ್ತು ಮಂಜೂರು ಮಾಡಿ ಸಾಗುವಳಿ ಚೀಟಿ ನೀಡಬೇಕು. ಖಾಸಗೀಕರಣ, ಬೆಲೆ ಏರಿಕೆ, ಹಾಲಿನ ದರ ಕಡಿತ ವಿರೋಧಿಸುತ್ತೇವೆ ಎಂದರು.
ಕಬ್ಬಿಗೆ ಟನ್ ಒಂದಕ್ಕೆ 4,500 ರೂ. ಬೆಲೆ ನಿಗದಿ ಮಾಡಬೇಕು. ಕಬ್ಬಿನ ಬಾಕಿಯನ್ನು ರೈತರ ಖಾತೆಗೆ ಜಮಾ ಮಾಡಬೇಕು. ಭತ್ತಕ್ಕೆ ವೈಜ್ಞಾನಿಕ ಬೆಲೆ ನೀಡಬೇಕು. ಶಾಶ್ವತ ಖರೀದಿ ಕೇಂದ್ರ ತೆರೆಯಬೇಕು. ಕೆ.ಆರ್.ಎಸ್.ಸುತ್ತಮುತ್ತ ಗಣಿಗಾರಿಕೆಯನ್ನು ಶಾಶ್ವತವಾಗಿ ನಿಷೇಧಿಸಿ ಕನ್ನಂಬಾಡಿ ಕಟ್ಟೆ ರಕ್ಷಿಸಬೇಕು.
ಮಂಡ್ಯದ ಮೈಮುಲ್ ಹಗರಣವನ್ನು ಸಿಬಿಐಗೆ ವಹಿಸಬೇಕು. ಮೈಶುಗರ್ ಕಾರ್ಖಾನೆಯನ್ನು ಕೂಡಲೇ ತೆರೆಯಬೇಕು. ಹೊಸ ಶಿಕ್ಷಣ ನೀತಿ ಜಾರಿ ತಡೆಹಿಡಿಯಬೇಕು. ಕೊಡಗು ಸೇರಿದಂತೆ ಮಲೆನಾಡಿನ ಇತರ ಜಿಲ್ಲೆಗಳಲ್ಲಿ ಅತಿ ಮಳೆಯಿಂದಾಗಿರುವ ಫಸಲು ನಷ್ಟಕ್ಕೆ ವೈಜ್ಞಾನಿಕ ಪರಿಹಾರ ನೀಡಬೇಕು.
ಕೊಡಗು ಸೇರಿದಂತೆ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಅತಿ ಮಳೆಯಿಂದಾಗಿರುವ ಫಸಲು ನಷ್ಟಕ್ಕೆ ವೈಜ್ಞಾನಿಕ ಪರಿಹಾರ ನೀಡಬೇಕು.
ಕೊಡಗು ಸೇರಿದಂತೆ ಮಲೆನಾಡಿನ ಇತರ ಜಿಲ್ಲೆಗಳಿಗೂ 10 ಹೆಚ್.ಪಿ ಕೃಷಿಪಂಪ್ ಸೆಟ್ ಗೆ ಉಚಿತ ವಿದ್ಯುತ್ ನೀಡಬೇಕು. ಸಂಪೂರ್ಣ ಬೆಳೆಸಾಲವನ್ನು ಮನ್ನಾ ಮಾಡಬೇಕು. ವನ್ಯಜೀವಿಗಳ ಹಾವಳಿಯನ್ನು ಶಾಶ್ವತವಾಗಿ ತಪ್ಪಿಸಬೇಕು.
ಎನ್ ಟಿ ಎಂ ಕನ್ನಡ ಶಾಲೆಯನ್ನು ಈಗಿರುವ ಸ್ಥಳದಲ್ಲೇ ಉಳಿಸಬೇಕು. ಮೈಸೂರು ತಾಲೂಕು ವರುಣ ಹೋಬಳಿ, ಕೋಚನಹಳ್ಳಿ ಗ್ರಾಮದ ರೈತರಿಗೆ ಮೋಸ ಮಾಡಿರುವ ಹೆರಿಟೇಜ್ ಕಂಪನಿಯವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಪ್ರಧಾನ ಮಂತ್ರಿ ಫಸಲು ಭೀಮಾ ಯೋಜನೆಯಡಿಯಲ್ಲಿ ವಿಮಾ ಹಣ ತುಂಬಿದ ರೈತರಿಗೆ ಉಳಿಸಿಕೊಂಡಿರುವ ಪರಿಹಾರವನ್ನು ಕೂಡಲೇ ಪಾವತಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಹಿರಿಯ ಹೋರಾಟಗಾರರಾದ ಪ.ಮಲ್ಲೇಶ್, ರೈತ ಸಂಘದ ಜಿಲ್ಲಾಧ್ಯಕ್ಷರಾದ ಹೊಸೂರು ಕುಮಾರ್, ಹೊಸಕೋಟೆ ಬಸವರಾಜ್, ದಕ್ಷಿಣ ಪದವೀಧರ ಕ್ಷೇತ್ರದ ಅಭ್ಯರ್ಥಿಯಾದ ಪ್ರಸನ್ನ ಎನ್ ಗೌಡ , ಮಂಡಕಳ್ಳಿ ಮಹೇಶ್, ಕಲ್ಲಳ್ಳಿ ಕುಮಾರ್ ಉಪಸ್ಥಿತರಿದ್ದರು.