ನ.26ಕ್ಕೆ ಗೋವಿಂದ ಗೋವಿಂದ ಚಿತ್ರ ರಾಜಾದ್ಯಂತ ಬಿಡುಗಡೆ

ದಾವಣಗೆರೆ.ನ.೨೨: ಸುಮಂತ್ ಶೈಲೇಂದ್ರ ನಟಿಸಿರುವ ಕಾಮಿಡಿ , ಥಿಲ್ಲರ್ ಕಥಾಹಂದರ ಇರುವ ಗೋವಿಂದ ಗೋವಿಂದ ಇದೇ ತಿಂಗಳ 26 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ ಎಂದು ಚಲನಚಿತ್ರದ ನಿರ್ದೇಶಕ ತಿಲಕ್ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರದಲ್ಲಿ ನಾಯಕನಾಗಿ ಸುಮಂತ್ ಶೈಲೇಂದ್ರ ನಟಿಸಿದ್ದಾರೆ , ತಿರುಪತಿ ಎಕ್ಸ್‌ಪ್ರೆಸ್ ನಂತರ ಹಾಸ್ಯಪ್ರದಾನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಚಿತ್ರ ಇದಾಗಿದೆ . ವಿಜಯ್‌ಚೆಂಡೂರು ಹಾಗೂ ಪವನ್‌ಕುಮಾರ್‌ ಮತ್ತೊಂದು ಪ್ರಮುಖ ಪಾತ್ರದಲ್ಲಿ ರೂಪೇಶ್‌ಶೆಟ್ಟಿ ನಟಿಸಿದ್ದು , ನಾಯಕಿಯರಾಗಿ ಕವಿತಾಗೌಡ ಹಾಗೂ ಭಾವನಮೆನನ್ ನಟಿಸಿದ್ದಾರೆ ಎಂದರು.ಹಲವು ಧಾರಾವಾಹಿಗಳಿಗೆ ಆ್ಯಕ್ಷನಕಟ್ ಹೇಳಿದ್ದ ತಿಲಕ್ , ಇದೇ ಮೊದಲಬಾರಿಗೆ ಸಿನಿಮಾ ನಿರ್ದೇಶನಕ್ಕೆ ಕೈಹಾಕಿದ್ದಾರೆ . ಶೈಲೇಂದ್ರ ಪ್ರೊಡಕ್ಷನ್ಸ್ , ಎಲ್.ಜಿ. ಕ್ರಿಯೇಷನ್ಸ್ ಹಾಗೂ ರವಿ ಗರಣಿ ಪ್ರೊಡಕ್ಷನ್ಸ್ ಮೂಲಕ ಶೈಲೇಂದ್ರಬಾಬು , ಕಿಶೋರ್ ಎಂ.ಕೆ. ಮಧುಗಿರಿ ಹಾಗೂ ರವಿ ಆರ್.ಗರಣಿ ಈ ಚಿತ್ರವನ್ನು ನಿರ್ಮಿಸಿದ್ದಾರೆ . ಜನಾರ್ದನ್‌ರಾಮ್ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಹೇಳಿದರು.ನಿರ್ದೇಶಕನಾಗಬೇಕೆಂದು ಹೊರಟ ಯುವಕನೊಬ್ಬ ತನ್ನ ಕಲ್ಪನೆಯಲ್ಲಿ ಮಾಡಿಕೊಂಡಿದ್ದ ಕಥೆಯೊಳಗೆ ಬರುವ ಪಾತ್ರಗಳೇ ತನ್ನ ನಿಜ ಜೀವನದಲ್ಲೂ ಎದುರಾದಾಗ ಆತನ ಸ್ಥಿತಿ ಏನಾಗಿರುತ್ತೆ ಎನ್ನುವುದೇ ಚಿತ್ರದ ಒನ್‌ಲೈನ್‌ ಸ್ಟೋರಿ . ವಿಜಯಪುರದಿಂದ ಬೆಂಗಳೂರಿಗೆ ಬರುವ ಮೂವರು ಪಡ್ಡೆ ಹುಡುಗರು , ಪ್ರತಿಭಾವಂತ ನಿರ್ದೇಶಕ ಹಾಗೂ ಟಾಪ್‌ಮೋಸ್ಟ್ ಹೀರೋಯಿನ್ ಒಬ್ಬಳ ಜೀವನದಲ್ಲಿ ಎಂಟ್ರಿ ಕೊಟ್ಟಾಗ ಅವರ ಲೈಫ್‌ನಲ್ಲಿ ದೊಡ್ಡ ತಿರುವೊಂದು ಜರುಗುತ್ತದೆ ಎಂದು ಹೇಳಿದರು.ಅದಾದ ನಂತರ ಚಿತ್ರಕಥೆ ಅನೇಕಾನೇಕ ಟ್ವಿಸ್ಟ್‌ಗಳನ್ನು ಪಡೆದುಕೊಳ್ಳುತ್ತಾ ಕಾಮಿಡಿಯಾಗಿ ಆರಂಭವಾದ ಕಥೆ ಥಿಲ್ಲರ್‌ಗೆ ಟರ್ನ್ ಆಗುತ್ತದೆ . ಚಿತ್ರದ ಫಸ್ಟ್ ಹಾಫ್ ಕಾಮಿಡಿಯಾಗಿದ್ದರೆ , ಸೆಕೆಂಡ್ ಹಾಫ್ ಥಿಲ್ಲರ್‌ಗೆ ತಿರುಗಿ ಕಾಮಿಡಿಯಲ್ಲಿ ಎಂಡ್ ಆಗುತ್ತದೆ . ಒಟ್ಟು ಆರು ಹಾಡುಗಳ ಜೊತೆಗೆ ಎರಡು ಬಿಟ್‌ಸಾಂಗ್ ಚಿತ್ರದಲ್ಲಿವೆ . ದೇವ್ ರಂಗಭೂಮಿ ಕಥೆ , ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಕೆ.ಎಸ್ . ಚಂದ್ರಶೇಖರ್ ಅವರ ಛಾಯಾಗ್ರಹಣವಿದೆ . ಬಿಜಾಪುರದಲ್ಲಿ 25 ದಿನ ಹಾಗೂ ಮಧುಗಿರಿಯಲ್ಲಿರುವ ಏಶಿಯಾದಲ್ಲೇ ಅತಿದೊಡ್ಡದು ಎನಿಸಿಕೊಂಡ ಏಕಶಿಲಾಬೆಟ್ಟದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಚಿತ್ರ ಯು ಪ್ರಮಾಣ ಪತ್ರ ಪಡೆದಿದೆ ಎಂದು ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ಸುಮಂತ್ ಶೈಲೇಂದ್ರ, ಕವಿತಾಗೌಡ ಇದ್ದರು.