ನ. 25 ವಿಧಾನಸೌಧ ಚಲೋ ಡಿಎಸ್‌ಎಸ್ ನಿರ್ಧಾರ

ಬೆಂಗಳೂರು,ನ.೧೯- ಅರ್ಹರಿಗೆ ಭೂಮಿ ವಿತರಿಸುವುದು ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ಒತ್ತಾಯಿಸಿ ನ. ೨೫ ರಂದು ದಸಂಸ (ಅಂಬೇಡ್ಕರ್ ವಾದ) ವಿಧಾನಸೌಧ ಚಲೋ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.
ಸರ್ಕಾರ ಅರ್ಹರಿಗೆ ಭೂಮಿ ನೀಡುವಲ್ಲಿ ವಿಫಲವಾಗಿದೆ. ಶ್ರೀಮಂತರು ಮತ್ತು ಪ್ರಾಬಲ್ಯವುಳ್ಳವರಿಗೆ ನೂರಾರು ಎಕರೆ ಜಮೀನನ್ನು ಬೇಷರತ್ತಾಗಿ ನೀಡುತ್ತಿದೆ. ಜಮೀನಿಗಾಗಿ ತೋಟಿ, ತಳವಾರ, ಇನ್ನಿತರ ಅರ್ಹ ಪರಿಶಿಷ್ಟ ಕುಟುಂಬಗಳು ಅರ್ಜಿ ಸಲ್ಲಿಸಿ, ಕಾಯುತ್ತ ಕುಳಿತಿವೆ. ಆದರೂ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ದಸಂಸ (ಅಂಬೇಡ್ಕರ್ ವಾದ) ರಾಜ್ಯಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಸುದ್ದಿಗೋಷ್ಢಿಯಲ್ಲಿ ಆರೋಪಿಸಿದರು.
ಪರಿಶಿಷ್ಟ ತಳ ಸಮುದಾಯದ ವಸತಿರಹಿತರಿಗೆ ೯೪ಸಿ ಮತ್ತು ೯೪ಸಿಸಿ ಅಡಿಯಲ್ಲಿ ಸೂರು ಕಲ್ಪಿಸಬೇಕು, ಆದರೂ ಕಳೆದ ೩ ವರ್ಷಗಳಿಂದಲೂ ಸರ್ಕಾರ ತಡೆ ಹಿಡಿದಿದೆ, ಉಳಿದಂತೆ ಆಯ್ದ ಹಲವು ಇಲಾಖೆಗಳಲ್ಲಿ ಪರಿಶಿಷ್ಟಿ ಜಾತಿ ಪಂಗಡದ ೨೪೩೦ ಬ್ಯಾಕ್‌ಲಾಗ್ ಹುದ್ದೆಗಳು ಖಾಲಿ ಉಳಿದಿವೆ. ೧೯೯೦ ಹುದ್ದೆಗಳು ೨ ದಶಕಗಳಿಂದಲೂ ಭರ್ತಿಯಾಗಿಲ್ಲ. ಉನ್ನತ ಶಿಕ್ಷಣ ಇಲಾಖೆ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಗಳಲ್ಲೂ ಹಲವು ವರ್ಷಗಳಿಂದ ಬ್ಯಾಕ್‌ಲಾಗ್ ಹುದ್ದೆ ಭರ್ತಿಯಾಗಿಲ್ಲ ಎಂದು ಶಂಕರ್ ಆರೋಪಿಸಿದರು.
ಪರಿಶಿಷ್ಟ ಜಾತಿ ಹಾಗೂ ಪಂಗಡದ ನಿಧಿ ದುರ್ಬಳಕೆಯನ್ನು ನಿಲ್ಲಿಸಬೇಕು. ಈ ಹಣ ಪರಿಶಿಷ್ಟರ ಅಭಿವೃದ್ಧಿಗೆ ಮಾತ್ರ ಬಳಕೆಯಾಗಬೇಕು ಸೇರಿದಂತೆ ಈ ಎಲ್ಲ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಡೆಸುತ್ತಿರುವ ವಿಧಾನಸೌಧ ಚಳವಳಿಗೆ ದುಡಿಯುವ ವರ್ಗ ಹಾಗೂ ಪ್ರಜ್ಞಾವಂತ ನಾಗರಿಕರು ಬೆಂಬಲಿಸಬೇಕೆಂದು ಶಂಕರ್ ಮನವಿ ಮಾಡಿದರು. ವೇದಿಕೆಯಲ್ಲಿ ಸಂಚಾಲಕ ಕಾರಳ್ಳಿ ಶ್ರೀನಿವಾಸ್, ಖಜಾಂಚಿ ಸಿದ್ದಾರ್ಥ್ ಶ್ರೀನಿವಾಸ್, ರಾಜ್ಯಸಮಿತಿ ಸದಸ್ಯೆ ನಿರ್ಮಲಾ ಇದ್ದರು.