ನ. 25ರಂದು ಡಾ. ಗುಬ್ಬಿಯವರ 2 ಕೃತಿಗಳ ಜನಾರ್ಪಣೆ

ಕಲಬುರಗಿ:ನ.22:ನಗರದ ಡಾ. ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ನವೆಂಬರ್ 25ರಂದು ಶುಕ್ರವಾರ ಬೆಳಿಗ್ಗೆ 10-30ಕ್ಕೆ ಹಿರಿಯ ವೈದ್ಯ ಹಾಗೂ ಖ್ಯಾತ ಸಾಹಿತಿ ಡಾ. ಎಸ್.ಎಸ್. ಗುಬ್ಬಿಯವರ ಎರಡು ಕೃತಿಗಳ ಜನಾರ್ಪಣೆ, ಮಾಜಿ ಸೈನಿಕರಿಗೆ ಸನ್ಮಾನ ಹಾಗೂ ಸಂಗೀತ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಎಸ್.ಎಸ್. ಹಿರೇಮಠ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೈದ್ಯಾಮೃತ ಮತ್ತು ಸಮಾಜ ದರ್ಶನ ಎಂಬ ಎರಡು ಕೃತಿಗಳನ್ನು ಶ್ರೀ ಜಯದೇವ್ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರೂ ಹಾಗೂ ಪದ್ಮಶ್ರೀ ಪುರಸ್ಕøತ ಡಾ. ಸಿ.ಎನ್. ಮಂಜುನಾಥ್ ಅವರು ಜನಾರ್ಪಣೆ ಮಾಡುವರು. ಉದ್ಘಾಟನೆಯನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷರೂ ಆದ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ್ ಪಾಟೀಲ್ ರೇವೂರ್ ಅವರು ನೆರವೇರಿಸುವರು ಎಂದರು.
ದಿವ್ಯ ಸಾನಿಧ್ಯವನ್ನು ಶ್ರೀನಿವಾಸ್ ಸರಡಗಿಯ ಡಾ. ರೇವಣಸಿದ್ಧ ಶಿವಾಚಾರ್ಯರು, ಅಧ್ಯಕ್ಷತೆಯನ್ನು ಪ್ರೊ. ಡಾ. ಪಿ.ಎಸ್. ಶಂಕರ್ ಅವರು ವಹಿಸುವರು. ಮುಖ್ಯ ಅತಿಥಿಗಳಾಗಿ ಸಂಸದ ಡಾ. ಉಮೇಶ್ ಜಾಧವ್ ಅವರು ಆಗಮಿಸುವರು. ಡಾ. ಎಸ್.ಎಸ್. ಗುಬ್ಬಿ ಅವರು ಉಪಸ್ಥಿತರಿರುವರು. ನಿವೃತ್ತ ಸೈನಿಕರಿಗೆ ವಿಶೇಷ ಸನ್ಮಾನ ನೆರವೇರಿಸಲಾಗುವುದು. ಶ್ರೀಮತಿ ವಿಜಯಲಕ್ಷ್ಮೀ ಕೆಂಗನಾಳ್ ಹಾಗೂ ಸಂಗಡಿಗರಿಂದ ಸಂಗೀತ ಸಂಭ್ರಮ ಜರುಗಲಿದೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸತ್ಯಂ ಪಿಯು ಕಾಲೇಜಿನ ಪ್ರಿನ್ಸಿಪಾಲ್ ಬಿ.ಎಚ್. ನಿರಗುಡಿ, ಸಾಹಿತಿ ಡಾ. ಶರಣಬಸಪ್ಪ ವಡ್ಡನಕೇರಿ, ಸಿದ್ಧರಾಮ್ ಹೊನ್ಕಲ್, ಡಾ. ಎಸ್.ಎಸ್. ಗುಬ್ಬಿ ಅವರು ಉಪಸ್ಥಿತರಿದ್ದರು.