ನ.24 ರಿಂದ ತಹಸೀಲ್ದಾರ್ ವರ್ಗಾವಣೆಗೆ ಒತ್ತಾಯಿಸಿ ಆಹೋರಾತ್ರಿ ಹೋರಾಟ

ಕೆ.ಆರ್.ಪೇಟೆ.ನ.19: ತಾಲೂಕಿನ ತಹಸೀಲ್ದಾರ್ ವರ್ಗಾವಣೆಗೆ ಒತ್ತಾಯಿಸಿ ತಾಲೂಕು ರೈತಸಂಘ ನವಂಬರ್ 24 ರಿಂದ ಪಟ್ಟಣದ ತಾಲೂಕು ಆಡಳಿತ ಸೌಧದ ಮುಂದೆ ಆರಂಭಿಸಲಿರುವ ಆಹೋರಾತ್ರಿ ಹೋರಾಟದ ಪೂರ್ವಭಾವಿ ಸಭೆ ಪಟ್ಟಣದ ಪ್ರವಾಸಿಮಂದಿರದಲ್ಲಿಂದು ನಡೆಯಿತು.
ಸಭೆಯಲ್ಲಿ ಮಾತನಾಡಿದ ರೈತಮುಖಂಡ ಎಂ.ವಿ.ರಾಜೇಗೌಡ ತಾಲೂಕು ಕಛೇರಿಯಲ್ಲಿ ರೈತ ಸಮುದಾಯಕ್ಕೆ ಆಗುತ್ತಿರುವ ಕಿರುಕುಳ ನಿಲ್ಲಬೇಕಾದರೆ ರೈತ ವಿರೋಧಿಯಾದ ತಹಸೀಲ್ದಾರ್ ನಮ್ಮ ಕ್ಷೇತ್ರದಿಂದ ತೊಲಗಲೇಬೇಕು. ಇದಕ್ಕಾಗಿಯೇ ತಹಸೀಲ್ದಾರ್ ಎಂ.ವಿ.ರೂಪ ತೊಲಗಲಿ, ರೈತರು ಉಳಿಯಲಿ ಎನ್ನುವ ಹೆಸರಿನಲ್ಲಿ ಈಗಾಗಲೇ ಕರಪತ್ರಗಳನ್ನು ಮುದ್ರಿಸಿ ಹಂಚಲಾಗುತ್ತಿದೆ. ತಾಲೂಕಿನ ಪ್ರಗತಿಪರ ಸಂಘಟನೆಗಳು ಮತ್ತು ವಿವಿಧ ರಾಜಕೀಯ ಪಕ್ಷಗಳ ಮುಖಂಡರು ನಮ್ಮ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ನಮ್ಮ ಚಳುವಳಿ ಯಾವುದೋ ಒಬ್ಬ ಅಧಿಕಾರಿ ಅಥವಾ ರಾಜಕಾರಣಿಯ ವಿರುದ್ದ ಅಲ್ಲ. ಬದಲಾಗಿ ತಾಲೂಕಿನ ರೈತ ಸಮುದಾಯದ ಸ್ವಾಭಿಮಾನದ ಉಳಿವಿಗಾಗಿ ಆರಂಭಿಸುತ್ತಿರುವ ಹೋರಾಟ. ದೇಶದ ಜನರಿಗೆ ಅನ್ನ ಹಾಕುವ ರೈತ ತಹಸೀಲ್ದಾರ್ ಕಛೇರಿಯ ಮುಂದೆ ಭಿಕ್ಷುಕನಂತೆ ಕಾದು ನಿಲ್ಲುವ ಪರಿಸ್ಥಿತಿ ನಮ್ಮ ತಾಲೂಕಿನಲ್ಲಿ ನಿರ್ಮಾಣವಾಗಿದೆ. ಸಭೆ ಸಮಾರಂಭಗಳಲ್ಲಿ ಭಾಗವಹಿಸುವುದರಲ್ಲಿಯೇ ಕಾಲ ಕಳೆಯುತ್ತಿರವ ತಹಸೀಲ್ದಾರರು ರೈತರ ಸಮಸ್ಯೆಗಳ ಪರಿಹಾರಕ್ಕೆ ಸಮಯ ಮೀಸಲಿಡುತ್ತಿಲ್ಲ. ರೈತರಿಗೆ ಸಿಗದ ತಹಸೀಲ್ದಾರ್ ನಮಗೆ ಬೇಕಾಗಿಲ್ಲ. ತಹಸೀಲ್ದಾರರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಲೇಬೇಕು. ಇಲ್ಲವಾದಲ್ಲಿ ಸಭೆ ಸಮಾರಂಭಗಳಲ್ಲಿ ಭಾಗವಹಿಸಲು ಒಬ್ಬರು, ಕಛೇರಿಯಲ್ಲಿ ಕುಳಿತು ಕೆಲಸ ಮಾಡಲು ಒಬ್ಬರು, ಮತ್ತು ಚುನಾವಣೆ, ಕೋರ್ಟು ಕಛೇರಿಗಳ ವ್ಯವಹಾರಗಳನ್ನು ನೊಡಿಕೊಳ್ಳಲು ಒಬ್ಬರಂತೆ ನಮ್ಮ ತಾಲೂಕಿಗೆ ಮೂವರು ತಹಸೀಲ್ದಾರರನ್ನು ನೇಮಕ ಮಾಡಬೇಕೆಂದು ಛೇಡಿಸಿದರು.
ನಮ್ಮ ಚಳುವಳಿಯ ಪ್ರತಿಫಲ ರೈತ ಚಳುವಳಿಯಿಂದ ದೂರವಿರುವ ತಾಲೂಕಿನ ಲಕ್ಷಾಂತರ ರೈತರಿಗೆ ದೊರಕಲಿದೆ. ನಾವು ರೈತ ಪ್ರತಿನಿಧಿಗಳಾಗಿ ಹೋರಾಟದಲ್ಲಿರಬೇಕು. ಇತರ ರಾಜಕೀಯ ಪಕ್ಷಗಳ ಮುಖಂಡರು ನಮ್ಮ ಚಳುವಳಿಯನ್ನು ಬೆಂಬಲಿಸಿ ರೈತ ಚಳುವಳಿಯಲ್ಲಿ ಭಾಗವಹಿಸಲಿದ್ದಾರೆ. ರಾಜಕೀಯ ಪಕ್ಷಗಳ ಕಾರ್ಯಕರ್ತರು ನಮ್ಮ ಚಳುವಳಿಯಲ್ಲಿ ಭಾಗವಹಿಸುವುದರಿಂದ ನಮ್ಮ ಚಳುವಳಿಯಲ್ಲಿ ರಾಜಕೀಯ ನುಸುಳದಂತೆ ಎಚ್ಚರಿಕೆ ವಹಿಸಬೇಕು. ಇದು ಅನಿರ್ಧಿಷ್ಟ ಕಾಲದ ಆಹೋರಾತ್ರಿ ಚಳುವಳಿಯಾದ ಕಾರಣ ರೈತ ಹೋರಾಟಗಾರರು ಕೆಲವು ಕಾಲ ತಮ್ಮ ಕುಟುಂಬಗಳನ್ನು ತ್ಯಾಗಮಾಡಿ ಚಳುವಳಿಗೆ ಬರಬೇಕು. ಕಂದಾಯ ಇಲಾಖೆ, ಸರ್ವೆ ಇಲಾಖೆ ಮತ್ತು ಗ್ರಾಮ ಪಂಚಾಯತಿಗಳನ್ನು ನಮ್ಮ ಸರ್ಕಾರಗಳು ರೈತಸ್ನೇಹಿ ರೂಪಿಸಿದರೆ ಸಾಕು. ರೈತರ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತವೆ ಎಂದ ಎಂ.ವಿ.ರಾಜೇಗೌಡ ನಮ್ಮದು ತಹಸೀಲ್ದಾರ್ ಹಠಾವೋ ಚಳುವಳಿಯಾದ ಕಾರಣ ಆಡಳಿತ ವ್ಯವಸ್ಥೆ ನಮ್ಮ ಚಳುವಳಿಯನ್ನು ಹತ್ತಿಕ್ಕಲು ಪ್ರಯತ್ನಿಸಬಹುದು. ರೈತ ಚಳುವಳಿಗಾರರು ಎಂತಹ ಕಠಿಣ ಪರಿಸ್ಥಿತಿ ನಿರ್ಮಾಣವಾದರೂ ಉದ್ರೇಕಕ್ಕೆ ಒಳಗಾಗದೆ ಶಾಂತಿಯಿಂದ ಇದ್ದು ಚಳುವಳಿಯ ಶಿಸ್ತಿಗೆ ಭಂಗಬರದಂತೆ ನಡೆದುಕೊಳ್ಳಬೇಕು. ಚಳುವಳಿಯ ಸಂದರ್ಭದಲ್ಲಿ ಅಧಿಕಾರಿಗಳ ವಿರುದ್ದ ತುಚ್ಚ ಭಾಷೆಯನ್ನು ಬಳಕೆ ಮಾಡದೆ ಗೌರವಯುತ ಹೋರಾಟದ ಮೂಲಕ ನಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕೆಂದರು. ತಹಸೀಲ್ದಾರರ ಮುಖಭಂಗ ಮಾಡುವುದು ನಮ್ಮ ಉದ್ದೇಶವಲ್ಲ. ಬದಲಾಗಿ ರೈತರ ಆತ್ಮ ಗೌರವವನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ನಮ್ಮ ಹೋರಾಟ ಆರಂಭಿಸಲಾಗುತ್ತಿದೆ. ತಹಸೀಲ್ದಾರರು ತಾವೇ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿ ಬೇರೆಡೆ ವರ್ಗಾವಣೆ ಮಾಡಿಸಿಕೊಳ್ಳುವಂತೆ ರಾಜೇಗೌಡ ಸಲಹೆ ನೀಡಿದರು.
ಬೆಲೆ ನಿಗಧಿಯವರೆಗೆ ಕಬ್ಬಿಗೆ 2900 ರೂ ಮುಂಗಡ ನೀಡಿ: ಕಬ್ಬಿನ ಬೆಂಬಲ ಹೆಚ್ಚಿಸಬೇಕು. ಪ್ರತಿ ಟನ್ ಕಬ್ಬಿಗೆ ಕನಿಷ್ಠ 4000 ರೂ ನೀಡಬೇಕು ಎಂದು ಒತ್ತಾಯಿಸಿ ರಾಜ್ಯದಲ್ಲಿ ರೈತ ಚಳುವಳಿ ನಡೆಯುತ್ತಿದೆ. ಪ್ರಸ್ತುತ ತಾಲೂಕಿನ ಕೋರಮಂಡಲ್ ಸಕ್ಕರೆ ಕಾರ್ಖಾನೆ ರೈತರಿಗೆ ಪ್ರತಿ ಟನ್ನಿಗೆ 2750 ರೂ ಮುಂಗಡ ನೀಡುತ್ತಿದ್ದು ಬೆಲೆ ನಿಗಧಿಯ ಅನಂತರ ಉಳಿದ ಹಣವನ್ನು ನೀಡುವುದಾಗಿ ಹೇಳುತ್ತಿದೆ. ಕೋರಮಂಡಲ್ ಸಕ್ಕರೆ ಕಾರ್ಖಾನೆ ರೈತರಿಗೆ ಪ್ರತಿಟನ್ನಿಗೆ 2900 ರೂ ಮುಂಗಡ ನೀಡಬೇಕು. ಅಧಿಕೃತವಾಗಿ ರೈತರಿಗೆ ಒಪ್ಪಿಗೆಯಾದ ಬೆಲೆ ನಿಗಧಿಯಾದ ಅನಂತರ ಉಳಿಕೆ ಹಿಂಬಾಕಿ ಹಣವನ್ನು ನೀಡಬೇಕೆಂದು ಇದೇ ಸಂದರ್ಭದಲ್ಲಿ ರೈತರು ಒತ್ತಾಯಿಸಿದರು.