ನ.23: ಹಂಸಲೇಖ ಪರ ಪ್ರಗತಿಪರ ಸಂಘಟನೆಗಳ ಪ್ರತಿಭಟನೆ

ತುಮಕೂರು, ನ. ೨೨- ಚಾಮರಾಜನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ದೇಶದ ದಲಿತರ ಸ್ಥಿತಿಗತಿ, ಬೂಟಾಟಿಕೆಯ ಸಹಪಂಕ್ತಿ ಭೋಜನಗಳ ಬಗ್ಗೆ ದ್ವನಿ ಎತ್ತಿದ್ದ ಖ್ಯಾತ ಸಂಗೀತ ನಿರ್ದೇಶಕ ನಾದಬ್ರಹ್ಮ ಹಂಸಲೇಖ ಅವರ ಬಗ್ಗೆ ಅವಹೇಳನಕಾರಿಯಾದ ರೀತಿಯಲ್ಲಿ ಹೇಳಿಕೆ ನೀಡುತ್ತಿರುವುದನ್ನು ಖಂಡಿಸಿ, ಅಹಿಂದ, ಪ್ರಗತಿಪರ ಹಾಗೂ ದಲಿತಪರ ಸಂಘಟನೆಗಳ ಒಕ್ಕೂಟದ ವತಿಯಿಂದ ನ. ೨೩ ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ನಗರದ ಅಂಬೇಡ್ಕರ್ ಭವನದಲ್ಲಿ ಅಲ್ಪಸಂಖ್ಯಾತರು, ಹಿಂದುಳಿದ, ದಲಿತ, ಪ್ರಗತಿ ಸಂಘಟನೆಗಳ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಚರ್ಚಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಸಂಗೀತ ನಿರ್ದೇಶಕರಾಗಿರುವ ಹಂಸಲೇಖ ಅವರ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ. ಅವರು ಈ ದೇಶದ ತಳಸಮುದಾಯಗಳು ಅನುಭವಿಸುತ್ತಿರುವ ನೋವು, ಸಂಕಟವನ್ನು ತಮ್ಮ ಮಾತಿನಲ್ಲಿ ಬಿಡಿಸಿಟ್ಟಿದ್ದಾರೆ. ಸ್ವತಹಃ ಅವರು ಅನುಭವಿಸಿದ ಅಸ್ಪೃಷ್ಯತೆಯನ್ನು ಜನತೆಯ ಮುಂದೆ ತೆರೆದಿಟ್ಟ ಹಂಸಲೇಖ, ಸ್ವಾತಂತ್ರ ಬಂದು ೭೫ ವರ್ಷ ಕಳೆದರು ಇನ್ನು ಎಷ್ಟು ದಿನ ದಲಿತರು, ಅಸ್ಪೃಷ್ಯತೆಯನ್ನು ಅನುಭವಿಸಬೇಕು ಎಂದು ಪ್ರಶ್ನಿಸಿದ್ದಾರೆ.
ಜಾತಿ ಹೋಗಲಾಡಿಸುವ ಬೂಟಾಟಿಕೆಯ ನಾಟಕವಾಡುವ ಮುಖಂಡರ ದಲಿತ ಮನೆಗಳಿಗೆ ಭೇಟಿ ನೀಡಿ, ಸಹಪಂಕ್ತಿ ಬೋಜನ ಮಾಡುವುದರಿಂದ ಜಾತಿಯತೆ ಹೋಗುವುದಿಲ್ಲ ಎಂಬ ಸತ್ಯವನ್ನು ನುಡಿದಿದ್ದಾರೆ. ಆದರೆ ಇದನ್ನು ಸಹಿಸದ ಕೆಲ ಮನುವಾದಿಗಳು, ಅವರ ಮೇಲೆ ಬಾಹ್ಯ ಒತ್ತಡ ಹಾಕಿ ಕ್ಷಮೆ ಕೇಳುವಂತೆ ಮಾಡಿದ್ದೇ ಅಲ್ಲದೆ, ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿ, ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಇದನ್ನು ಖಂಡಿಸಬೇಕಾಗಿರುವುದು ರಾಜ್ಯದ ಎಲ್ಲಾ ದಲಿತರು, ಹಿಂದುಳಿದ, ಅಲ್ಪಸಂಖ್ಯಾತರು, ಪ್ರಗತಿಪರರ ಅದ್ಯ ಕರ್ತವ್ಯವಾಗಿದೆ.
ಈ ಹಿನ್ನೆಲೆಯಲ್ಲಿ ನವೆಂಬರ್ ೨೩ರಂದು ಅಹಿಂದ, ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಈ ಪ್ರತಿಭಟನೆ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಮುಖಂಡರು ತಿಳಿಸಿದ್ದಾರೆ.
ಸಭೆಯಲ್ಲಿ ರಂಗಯ್ಯ, ಅತೀಕ್ ಅಹಮದ್, ಭಾನುಪ್ರಕಾಶ್, ಕೇಬಲ್ ರಘು, ಪಿ.ಎನ್.ರಾಮಯ್ಯ, ಇಕ್ಬಾಲ್ ಅಹಮದ್, ರಾಘವೇಂದ್ರಸ್ವಾಮಿ, ತಾಜುದ್ದೀನ್ ಷರೀಫ್, ಛಲವಾದಿ ಶೇಖರ್, ವೆಂಕಟೇಶ್ ಜೆ.ಸಿ.ಬಿ, ಕೊಟ್ಟ ಶಂಕರ್, ನುಕೇತನ್, ಶಿವಾಜಿ, ನರಸಿಂಹರಾಜು, ಯೋಗೀಶ್, ವೆಂಕಟೇಶ್ ಕೆ.ವಿ, ರಂಜನ್, ಹಬ್ಬತ್ತನಹಳ್ಳಿ ಶ್ರೀನಿವಾಸ್, ಕೋರ ರಾಜಣ್ಣ, ಕಂಬತ್ತನಹಳ್ಳಿ ನರಸಿಂಹಮೂರ್ತಿ, ಕೆಂಪರಾಜು, ಕೆಸರುಮಡು ಗೋಪಾಲ್, ನಟರಾಜು, ಮೋಹನ್ ಟಿ.ಪಿ, ವಿ.ರಾಮಾಂಜಿ, ಗೋಪಾಲ್, ಸುರೇಶ್, ರಾಮಮೂರ್ತಿ ಮತ್ತಿತರರು ಭಾಗವಹಿಸಿದ್ದರು.