ನ.23ರಿಂದ ನೀಟ್ ಪರೀಕ್ಷೆಗೆ ತರಬೇತಿ


ದಾವಣಗೆರೆ,ನ.೭: ಇಲ್ಲಿನ ಶ್ರೀಸಿದ್ಧಗಂಗಾ ವಿದ್ಯಾಸಂಸ್ಥೆ ವತಿಯಿಂದ ನ.೨೩ರಿಂದ ನೀಟ್ ಪರೀಕ್ಷೆಗೆ ತರಬೇತಿ ನೀಡಲಾಗುವುದು ಎಂದು ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿ’ಸೌಜಾ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀಸಿದ್ದಗಂಗಾ ವಿದ್ಯಾಸಂಸ್ಥೆ ೫೦ ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ೫೦ ಜನ ಬಡ ಮಕ್ಕಳಿಗೆ ಉಚಿತವಾಗಿ ಮತ್ತು ಬೇರೆ ಮಕ್ಕಳಿಗೆ ನಿಗದಿತ ಶುಲ್ಕ ಪಡೆದು ಉಚಿತವಾಗಿ ನೀಟ್ ಪರೀಕ್ಷೆ ನೀಡಲಾಗುವುದು. ಆದ್ದರಿಂದ ದ್ವಿತೀಯ ಪಿಯುಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ ತೇರ್ಗಡೆಯಾಗಿರುವ ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಕೊರೊನಾ ಸೋಂಕಿನ ಕಾರಣಕ್ಕೆ ಈಗಾಗಲೇ ನಡೆದಿರುವ ನೀಟ್ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳು ಬಂದಿಲ್ಲ. ಹೀಗಾಗಿ ಕೆಲ ಮಕ್ಕಳು ವೈದ್ಯಕೀಯ ಶಿಕ್ಷಣದ ಸೀಟ್‌ಗಳಿಂದ ವಂಚನೆಯಾಗುವ ಸಾಧ್ಯತೆ ಇದೆ. ಇನ್ನೂ ಐದಾರೂ ತಿಂಗಳಲ್ಲಿ ನೀಟ್ ಪರೀಕ್ಷೆ ನಡೆಯಲಿದ್ದು, ಅದಕ್ಕೆ ವಿದ್ಯಾರ್ಥಿಗಳನ್ನು ತಯಾರುಗೊಳಿಸಬೇಕೆಂಬ ಉದ್ದೇಶದಿಂದ ಈ ತರಬೇತಿ ನೀಡಲಾಗುತ್ತಿದೆ. ಆದ್ದರಿಂದ ಆಸಕ್ತರು ನ.೧೮ರ ಒಳಗೆ ೯೯೮೨೨೩೦೮೯೯ ಸಂಖ್ಯೆಗೆ ಮಿಸ್ಡ್‌ಕಾಲ್ ನೀಡುವ ಮೂಲಕ ಹೆಸರು ನೋಂದಾಯಿಸಿಕೊಳ್ಳಬೇಕೆಂದು ತಿಳಿಸಿದರು.
ದ್ವಿತೀಯ ಪಿಯುಸಿಯಲ್ಲಿ ೪೦೦ಕ್ಕೂ ಹೆಚ್ಚು ಪಡೆದ ಸಾಮಾನ್ಯ ವರ್ಗದ, ೩೫೦ಕ್ಕೂ ಹೆಚ್ಚು ಅಂಕ ಪಡೆದ ಇತರೆ ಹಿಂದುಳಿದ ವರ್ಗದ, ೩೦೦ಕ್ಕೂ ಹೆಚ್ಚು ಅಂಕ ಪಡೆದ ಪರಿಶಿಷ್ಟ ಜಾತಿ ಮತ್ತು ಪಂಗಡದ ಮಕ್ಕಳು ರಾಜ್ಯದ ಯಾವುದೇ ಮೂಲೆಯಿಂದ ಬಂದರೂ ತರಬೇತಿ ನೀಡಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ನಿರ್ದೇಶಕ ಡಿ.ಎಸ್.ಜಯಂತ್, ಪಿಯು ಪ್ರಾಂಶುಪಾಲೆ ಗಾಯತ್ರಿ ಚಿಮ್ಮಡ್, ಪ್ರಾಧ್ಯಾಪಕರುಗಳಾದ ಎಲ್.ವಿ.ಸುಬ್ರಹ್ಮಣ್ಯ, ಕೆ.ಸಿ.ಸಿದ್ದಪ್ಪ, ಯು.ಡಿ.ಲಕ್ಷ್ಮೀನಾರಾಯಣ ಮತ್ತಿತರರು ಹಾಜರಿದ್ದರು.