ನ. 23ಕ್ಕೆ ಕ್ಯಾನ್ಸರ್ ಜಾಗೃತಿ, ಉಚಿತ ತಪಾಸಣಾ ಶಿಬಿರ ಆರಂಭ

ಕಲಬುರಗಿ.ನ.20:ನಗರದ ಖೂಬಾ ಪ್ಲಾಟ್‍ದಲ್ಲಿರುವ ಎಚ್‍ಸಿಜಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ನವೆಂಬರ್ 23ರಿಂದ 30ರವರೆಗೆ ಕ್ಯಾನ್ಸರ್ ಜಾಗೃತಿ ಹಾಗೂ ಉಚಿತ ತಪಾಸಣಾ ಶಿಬಿರ ಹಮ್ಮಿಕೊಳ್ಳಾಗಿದೆ ಎಂದು ಖ್ಯಾತ ವೈದ್ಯ ಡಾ. ಶಾಂತಲಿಂಗ ನಿಗ್ಗುಡಗಿ ಅವರು ಇಲ್ಲಿ ಹೇಳಿದರು.
ಶುಕ್ರವಾರ ಆಸ್ಪತ್ರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಯಾನ್ಸರ್ ರೋಗಿಗಳು ಶಿಬಿರದ ಪ್ರಯೋಜನ ಪಡೆಯಬೇಕು ಎಂದು ಕೋರಿದರು.
ನಗರದಲ್ಲಿ ಪರಿಸರ ನೈರ್ಮಲ್ಯ ಹೆಚ್ಚುತ್ತಿದೆ. ರಸ್ತೆಗಳು ಹಾಳಾಗಿವೆ. ದಟ್ಟಣೆಯ ವಾಹನಗಳ ಸಂಚಾರ ಇದೆ. ದೂಮಪಾನಿಯರ ಸಂಖ್ಯೆಯೂ ಹೆಚ್ಚಿನ ಪ್ರಮಾಣದಲ್ಲಿದೆ. ಪ್ರಸ್ತುತ ಸನ್ನಿವೇಶದಲ್ಲಿ ಪ್ರತಿ ಹತ್ತು ಜನರಲ್ಲಿ ಆರು ಜನರಿಗೆ ಶ್ವಾಸಕೋಶದ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಕ್ಯಾನ್ಸರ್ ಆರಂಭಿಕ ಮಟ್ಟದಲ್ಲಿದ್ದರೆ ಪೂರ್ಣವಾಗಿ ಗುಣಪಡಿಸಲು ಸಾಧ್ಯವಿದೆ. ಜನರಿಗೆ ಕ್ಯಾನ್ಸರಿಗಿಂತ ಅದರ ಬಗ್ಗೆ ಇರುವ ಭಯವೇ ದೊಡ್ಡ ಅಪಾಯಕಾರಿ ಎಂದು ಹೇಳಿದ ಅವರು, ಜಿಲ್ಲೆಯ ಸಿಮೆಂಟ್ ಕಾರ್ಖಾನೆಯ ಕಾರ್ಮಿಕರು ಶ್ವಾಸಕೋಶ ಕ್ಯಾನ್ಸರ್ ಸಮಸ್ಯೆಗೆ ಒಳಗಾಬಹುದು ಎಂದರು.
ಧೂಮಪಾನಿಗಳಿಗೆ ಕ್ಯಾನ್ಸರ್ ಬರುತ್ತದೆ ಎಂದು ಎಚ್ಚರಿಸಿದ ಅವರು, ಶ್ವಾಸಕೋಶದ ಕ್ಯಾನ್ಸರ್‍ನಿಂದ ದೂರವಾಗಲು ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ಮಾಡಿದರು.
ಡಾ. ನಂದೀಶಕುಮಾರ್ ಜೀವಣಗಿ ಅವರು ಮಾತನಾಡಿ, ಶ್ವಾಸಕೋಶದ ಆರೋಗ್ಯವೂ ನಮ್ಮ ಕೈಯಲ್ಲಿದೆ. ಮೆಟಾಸ್ಟ್ಯಾಟಿಕ್ಶ್ವಾಸ್ ಕೋಶದ ಗಡ್ಡೆಗಳು ಆ ಪ್ರದೇಶ ಮತ್ತು ಗಾತ್ರದ ಮೇಲೆ ಲಕ್ಷಣಗಳನ್ನು ತೋರಿಸುತ್ತವೆ. ಶೇಕಡಾ 30ರಿಂದ 40ರಷ್ಟು ಜನರಲ್ಲಿ ಶ್ವಾಸಕೋಶದ ಕ್ಯಾನ್ಸರ್‍ನ ಕೆಲವು ಲಕ್ಷಣಗಳು ಅಥವಾ ಮೆಟಾಸ್ಟ್ಯಾಟಿಕ್ ಕಾಯಿಲೆ ಲಕ್ಷಣಗಳು ಕಾಣುತ್ತವೆ. ಶ್ವಾಸಕೋಶದ ಕ್ಯಾನ್ಸರ್ ಹೆಚ್ಚಾಗಿ (ಯಕೃತ್), ಮೂತ್ರಜನಕಾಂಗದ ಗ್ರಂಥಿ, ಮೂಳೆಗಳು ಮತ್ತು ಮೆದುಳಿಗೆ ಹಬ್ಬುವುದು. ಮೆಟಾಸ್ಟ್ಯಾಟಿಕ್ ಶ್ವಾಸಕೋಶದ ಕ್ಯಾನ್ಸರ್ ಬಾಧಿಸಿದರೆ ಆಗ ಹಸಿವು ಕಡಿಮೆಯಾಗುವುದು. ಊಟ ಮಾಡಲು ಆರಂಭಿಸಿದ ತಕ್ಷಣವೇ ಹೊಟ್ಟೆ ತುಂಬಿದಂತಾಗುತ್ತದೆ. ಅನಿರೀಕ್ಷಿತ ತೂಕ ಕಳೆದುಕೊಳ್ಳಲಾಗುತ್ತದೆ ಎಂದು ವಿವರಿಸಿದರು.
ಮೆಟಾಸ್ಟ್ಯಾಟಿಕ್ ಶ್ವಾಸಕೋಶದ ಕ್ಯಾನ್ಸರ್ ಮೂತ್ರ ಜನಕಾಂಗದ ಗ್ರಂಥಿಯಲ್ಲಿ ಕಾಣಿಸಿಕೊಂಡರೂ ಯಾವುದೇ ಲಕ್ಷಣಗಳನ್ನು ತೋರಿಸುವುದಿಲ್ಲ. ಮೆಟಾಸ್ಟ್ಯಾಟಿಕ್ ಮೂಳಗೆ ಬಂದಾಗ ಸಣ್ಣಕೋಶದ ಕ್ಯಾನ್ಸರ್ ಸಾಮಾನ್ಯ. ಆದರೆ ಇತರೆ ಶಾಸಕೋಶದ ಕ್ಯಾನ್ಸರನೊಂದಿಗೆ ಇದು ಕಂಡುಬರುವುದು. ಮೂಳೆಯಲ್ಲಿ ಇದು ಕಾಣಿಸಿಕೊಂಡಾಗ ಬೆನ್ನು ಮೂಳೆಯಲ್ಲಿ ನೋವು, ತೊಡಸಂಧಿನ ದೊಡ್ಡ ಮೂಳೆ, ಶ್ರೇಣಿಯ ಮೂಳೆಗಳು ಮತ್ತು ಕಿಬ್ಬೊಟ್ಟೆಯ ಮೂಳೆಗಳಲ್ಲಿ ನೋವು ಕಂಡುಬರುತ್ತದೆ ಎಂದು ಅವರು ಹೇಳಿದರು.
ಸಣ್ಣದಾಗಿ ಬಂದ ಕೆಮ್ಮು ಇದ್ದಕ್ಕಿದ್ದಂತೆ ವಿಪರೀತವಾಗುವುದು, ಕೆಮ್ಮುವಾಗ ಕಫ ಹಾಗೂ ರಕ್ತ ಬೀಳುವುದು, ಉಸಿರಾಡುವಾಗ, ಕೆಮ್ಮುವಾಗ ಅಥವಾ ನಗುವಾಗ ತುಂಬಾ ಎದೆನೋವು ಕಾಣಿಸಿಕೊಳ್ಳುವುದು, ಉಸಿರಾಟದ ತೊಂದರೆ ಕಂಡುಬರುವುದು, ದಮ್ಮು ಸಮಸ್ಯೆ, ಆಯಾಸ ಮತ್ತು ದೇಹ ದೌರ್ಬಲ್ಯ, ಹೊಟ್ಟೆ ಹಸಿವಾಗದಿರುವಿಕೆ, ದೇಹದ ತೂಕ ತಗ್ಗುವುದು, ನ್ಯೂಮೋನಿಯಾ ಅಥವಾ ಬ್ರಾಂಕೈಟಿ ಸೋಂಕುಗಳನ್ನು ಒಳಗೊಂಡಿರುವುದು ಕ್ಯಾನ್ಸರನ ಲಕ್ಷಣಗಳಾಗಿವೆ ಎಂದು ತಿಳಿಸಿದ ಅವರು, ಶಿಬಿರದ ಪ್ರಯೋಜನವನ್ನು ಸಂಬಂಧಿಸಿದವರು ಪಡೆಯಬೇಕು ಎಂದು ಕೋರಿದರು.