ನ.22 ರಿಂದ ಶಿರಸಂಗಿಯಲ್ಲಿ ವಿಶ್ವಕರ್ಮ ಮಹೋತ್ಸವ

ಬಾಗಲಕೋಟೆ :ನ.21: ವಿಶ್ವಕರ್ಮ ಜನಾಂಗದ ಕುಲದೇವತೆ ಶ್ರೀ ಕಾಳಿಕಾದೇವಿಯ ಕ್ಷೇತ್ರವಾದ ಸವದತ್ತಿ ತಾಲೂಕಿನ ಶಿರಸಂಗಿಯಲ್ಲಿ ಇದೇ ನವೆಂಬರ್ 22 ಹಾಗೂ 23 ರಂದು 22ನೇ ವಿಶ್ವಕರ್ಮ ಮಹೋತ್ಸವ ಜರುಗಲಿದೆಯೆಂದು ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆಯ ಅಧ್ಯಕ್ಷ ಪ್ರೊ// ಪಿ.ಬಿ. ಬಡಿಗೇರ ಅವರು ತಿಳಿಸಿದ್ದಾರೆ.

ಎರಡು ದಿನಗಳ ಈ ಮಹೋತ್ಸವದಲ್ಲಿ ಧಾರ್ಮಿಕ ಸಭೆ, ವಿಶ್ವಕರ್ಮರ ಪಂಚ ಕೌಶಲ್ಯಗಳಲ್ಲಿ ಸಾಧನೆ ಮಾಡಿದ ಸಾಧಕರ ಸನ್ಮಾನ, ಸಮಾಜದ 250ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, "ವಿಶ್ವಕರ್ಮ" ಸೇವಾ ಭೂಷಣ ಪ್ರಶಸ್ತಿ, ಕಲಾ ಪ್ರದರ್ಶನ, ಕಾರ್ತಿಕ ದೀಪೋತ್ಸವ ಹಾಗೂ ಆಕರ್ಷಕ ಸಿಡಿಮದ್ದು ಪ್ರದರ್ಶನದಂಥ ಕಾರ್ಯಕ್ರಮಗಳು ಜರುಗಲಿವೆ.
 ಮಹೋತ್ಸವದ ಮೊದಲ ದಿನವಾದ ನವೆಂಬರ್ 22 ರಂದು ಬೆಳಿಗ್ಗೆ ಸಂಸ್ಥೆಯ ಅಧ್ಯಕ್ಷರಿಂದ ಶ್ರೀ ವಿಶ್ವಕರ್ಮ ಧ್ವಜಾರೋಹಣ, ಕ್ಷೇತ್ರದೇವತೆ ಶ್ರೀ ಕಾಳಿಕಾ ದೇವಿಗೆ ಅಭಿಷೇಕ, ಪೂಜೆ ಹಾಗೂ ಭಕ್ತಾದಿಗಳಿಂದ ಕಾಣಿಕೆಗಳ ಅರ್ಪಣೆ ನಡೆಯಲಿದೆ. ನಂತರ, 10-30ಕ್ಕೆ ಕಲಾ ಪ್ರದರ್ಶನದ ಉದ್ಘಾಟನೆಯನ್ನು ಚೆನೈನ ವೈದಿಕ ಕಲಾ, ವಿಜ್ಞಾನ ಹಾಗೂ ತಂತ್ರಜ್ಞಾನ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಡಾ, ಕನಕರಾಜು ಧರ್ಮಪುರಿ ಅವರು ನೆರವೇರಿಸಲಿದ್ದು, ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರ ಸನ್ಮಾನ ಕಾರ್ಯಕ್ರಮಕ್ಕೆ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಅವರು ಚಾಲನೆ ನೀಡುವರು. ಬಾಗಲಕೋಟೆ ಶಾಸಕ ಹಾಗೂ ಬಿ.ವಿ.ವಿ. ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ, ತೇರದಾಳ ಕ್ಷೇತ್ರದ ಶಾಸಕ ಹಾಗೂ ರಾಜ್ಯ ಕೈಮಗ್ಗ ನಿಗಮದ ಅಧ್ಯಕ್ಷ ಸಿದ್ದು ಸವದಿ ಮತ್ತು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರು ಅವರು ಸೇರಿದಂತೆ ರಾಜ್ಯ ಐಎಂಎ ಫೌಂಡೇಶನ್‍ನ ಗೌರವ ಕಾರ್ಯದರ್ಶಿ ಭೋಜರಾಜ ಸಿ.ಎನ್ ಮತ್ತು ಗದಗ ಜಿಲ್ಲಾ ವಿಶ್ವಕರ್ಮ ನೌಕರರ ಸಂಘದ ಅಧ್ಯಕ್ಷ ರಾಜಗೋಪಾಲ ಕಡ್ಲಿಕೊಪ್ಪ ಅವರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಅರೆಮಾದನಹಳ್ಳಿ ವಿಶ್ವಕರ್ಮ ಜಗದ್ಗುರು ಪೀಠದ ಶ್ರೀ ಶಿವಸುಜ್ಞಾನ ತೀರ್ಥರು ಮತ್ತು ಯಡಹಳ್ಳಿ ಅಡವಿಸಿದ್ದೇಶ್ವರ ಮಠದ ಚಂದ್ರಶೇಖರ ಸ್ವಾಮಿಗಳು ಸಾನಿಧ್ಯ ವಹಿಸುವರು. ಸಂಸ್ಥೆಯ ಅಧ್ಯಕ್ಷ ಪ್ರೊ: ಪಿ.ಬಿ. ಬಡಿಗೇರ ಅವರು ಅಧ್ಯಕ್ಷತೆ ವಹಿಸುವರು.
 ಅಂದು, ಸಾಯಂಕಾಲ 4 ಗಂಟೆಗೆ ಶಿರಸಂಗಿ ಗ್ರಾಮದಲ್ಲಿ ವಿಶ್ವಕರ್ಮ ಪ್ರಬುವಿನ ಪಂಚಲೋಹ ಮೂರ್ತಿಯ ಭವ್ಯ ಮೆರವಣಿಗೆ ಜರುಗಲಿದ್ದು, ಮುತ್ತೈದೆಯರಿಂದ ಪೂರ್ಣಕುಂಭ ಮೆರವಣೀಗೆ ಹಾಗೂ ವಾದ್ಯ ಮೇಳಗಳು ಗಮನಸೆಳೆಯಲಿವೆ. ಸಂಜೆ 6-30ಕ್ಕೆ ದೀಪೋತ್ಸವ ಹಾಗೂ ಸಿಡಿಮದ್ದು ಪ್ರದರ್ಶನ, 7 ಗಂಟೆಗೆ ಮಹಾ ಪ್ರಸಾದ ದಾನಿಗಳ ಸನ್ಮಾನ ಮತ್ತು ವಿವಿಧ ಕಲಾತಂಡಗಳಿಂದ ನೃತ್ಯ ಹಾಗೂ ಸಂಗೀತ ಕಾರ್ಯಕ್ರಮಗಳು ಜರುಗಲಿವೆ.
ವಿಶ್ವಕರ್ಮ ಮಹೋತ್ಸವದ ಎರಡನೇ ದಿನ ನ. 23 ಛಟ್ಟಿ ಅಮವಾಸ್ಯೆಯಂದು ಪ್ರಾತಃಕಾಲ ವಿಶ್ವಕರ್ಮ ಮಹಾ ಪೂಜೆ ಹಾಗೂ ದಂಪತಿಗಳಿಂದ ಹೋಮ-ಹವನ ಮತ್ತು ಶ್ರೀ ಕಾಳಿಕಾ ದೇವಿಗೆ ಅಭಿಷೇಕ ಜರುಗಲಿವೆ. ನಂತರ, 11 ಗಂಟೆಗೆ ಸಂಸ್ಥೆಯ ಅಧ್ಯಕ್ಷರಾದ ಪ್ರೊ: ಪಿ.ಬಿ. ಬಡಿಗೇರ ಅವರಿಂದ ಶ್ರೀ ಕಾಳಿಕಾ ಸ್ತುತಿ, ನಂತರ ಧಾರ್ಮಿಕ ಸಭೆ, ಮಹಾ ಪ್ರಸಾದ ದಾನಿಗಳ ಮತ್ತು ಸಾಧಕರ ಸನ್ಮಾನ ಕಾರ್ಯಕ್ರಮಗಳು ಜರುಗುವವು.
 ಸಮಾರಂಭದ ಮುಖ್ಯ ಅತಿಥಿಗಳಾಗಿ ಬೆಳಗಾವಿ ಸಂಸದೆ ಶ್ರೀಮತಿ ಮಂಗಲಾ ಸುರೇಶ ಅಂಗಡಿ, ರಾಮದುರ್ಗ ಶಾಸಕ ಮಹಾದೇವಪ್ಪ ಯಾದವಾಡ, ಬೆಂಗಳೂರಿನ ಖ್ಯಾತ ಲೋಹ ಶಿಲ್ಪಿ ಬಿ. ಹೊನ್ನಪ್ಪ ಆಚಾರ್ಯ ರಾಜ್ಯ ಜೆಡಿಎಸ್ ವಕ್ತಾರ ಬಿ. ಉಮೇಶ್, ಶಿಲ್ಪಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ವೀರಣ್ಣ ಅರ್ಕಸಾಲಿ ಅವರು ಅತಿಥಿಗಳಾಗಿ ಪಾಲ್ಗೊಳ್ಳುವರು.
ಸಾಧಕರಿಗೆ ಪ್ರಶಸ್ತಿ : ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 12 ಜನರಿಗೆ ಸಾಧಕ ಪ್ರಶಸ್ತಿ ಹಾಗೂ ವಿಶ್ವಕರ್ಮ ಸಮಾಜದ 12 ಗಣ್ಯ ಸಾಧಕರಿಗೆ "ವಿಶ್ವಕರ್ಮ ಭೂಷಣ" ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಮೈಸೂರಿನ ಸ್ವರ್ಣ ಹಾಗೂ ರಜತ ಮೂರ್ತಿ ಶಿಲ್ಪಿ ಶ್ರೀನಿವಾಸ ಚನ್ನಪ್ಪ ಆಚಾರ್ಯ ಅವರಿಗೆ ವಿಶ್ವಶಿಲ್ಪಿ ಡಂಕಣಾಚಾರ್ಯ ಪ್ರಶಸ್ತಿ, ಧಾರವಾಡದ ಶ್ರೀ ಶಿವಣ್ಣ ಬಡಿಗೇರ ಅವರಿಗೆ ವಿಶ್ವಕರ್ಮ ಸಮಾಜ ಸೇವಾ ಭೂಷಣ ಪ್ರಶಸ್ತಿ, ಡಾ// ಕೆ.ಪಿ. ಈರಣ್ಣ (ವಿಶ್ವಕರ್ಮ ಇತಿಹಾಸ-ಸಂಶೋಧನೆ), ಶ್ರೀಮತಿ ಕೃಷ್ಣವೇಣಿ, ಬೆಂಗಳೂರು (ಶಿಕ್ಷಣ), ಮಾನಯ್ಯ ನಾ ಬಡಿಗೇರ, ಕಲಬುರ್ಗಿ (ಶಿಲ್ಪಕಲೆ), ಸಾಂಬಯ್ಯ ಆಚಾರ್ಯ, ಆಂಧ್ರಪ್ರದೇಶ (ಲೋಹಶಿಲ್ಪ), ಪಂ ರವೀಂದ್ರ ಯಾವಗಲ್ಲ, ಹುಬ್ಬಳ್ಳಿ (ಸಂಗೀತ), ಡಾ// ವೃಷಭೇಂದ್ರಾಚಾರ್ ಅರ್ಕಸಾಲಿ, ಕಾನಾ ಹೊಸಳ್ಳಿ (ಸಾಹಿತ್ಯ-ಸಂಶೋಧನೆ), ಬಸವರಾಜ ಬಡಿಗೇರ, ಬೆಂಗಳೂರು (ರಥಶಿಲ್ಪ), ರಮೇಶ ಯರಕದವರ, ಕಣದಾಳ (ಲೋಹಶಿಲ್ಪ), ಶ್ರೀಮತಿ ಭಾರತಿ ಟಂಕಸಾಲಿ, ವಿಜಯಪುರ (ಸಮಾಜ ಸೇವೆ), ಡಾ// ವಿರುಪಾಕ್ಷ ಬಡಿಗೇರ, ಧಾರವಾಡ (ಸಂಸ್ಕøತಿ ಪ್ರಸಾರ).

 ಶ್ರೀ ಕ್ಷೇತ್ರ ಶಿರಸಂಗಿಯಲ್ಲಿ ಮಹಾಪ್ರಸಾದಕ್ಕೆ ದೇಣೀಗೆ ನೀಡಿದ 120 ದಾನಿಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಮಹೋತ್ಸವದಲ್ಲಿ ಪಾಲ್ಗೊಳ್ಳುವಂತೆ ಸಂಸ್ಥೆಯ ಅಧ್ಯಕ್ಷ ಪ್ರೊ: ಪಿ.ಬಿ. ಬಡಿಗೇರ ಹಾಗೂ ವಿಶ್ವಕರ್ಮ ಪ್ರತಿಷ್ಠಾನದ ಅಧ್ಯಕ್ಷ ಮೌನೇಶ್ವರ ಸುಳ್ಳ ಅವರು ವಿನಂತಿಸಿದ್ದಾರೆ.