ನ. 22 ಕ್ಕೆ ಕನ್ನಡ ಕೀರ್ತಿ ಕಳಸ ಪ್ರಶಸ್ತಿ ಪ್ರದಾನ

ದಾವಣಗೆರೆ, ನ.೧೮; ದಾವಣಗೆರೆಯ ಸ್ನೇಹ, ಸೇವೆ, ಸಹಕಾರ, ಸೌಹಾರ್ದತೆಯ ಸದುದ್ದೇಶದ ಸಮಾನ ಮನಸ್ಕರ ಸೇವಾ ಸಮಿತಿಯಿಂದ ೬೫ನೇ ಕನ್ನಡ ರಾಜ್ಯೋತ್ಸವ, ಮಕ್ಕಳ ದಿನಾಚರಣೆ ಹಾಗೂ ಸಂಸ್ಥೆಯ ಪ್ರಥಮ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ೨೦೧೯-೨೦ನೇ ಸಾಲಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಪ್ರಥಮ ಭಾಷೆ ಕನ್ನಡದಲ್ಲಿ ೧೨೫ ಕ್ಕೆ ೧೨೫ ಪರಿಪೂರ್ಣ ಅಂಕ ಪಡೆದ ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಪ್ರೌಢಶಾಲಾ ಮಕ್ಕಳಿಗೆ “ಕನ್ನಡ ಕೀರ್ತಿ ಕಳಸ” ಪ್ರಶಸ್ತಿ ನೀಡಿ ಗೌರವಿಸುವ ಸಮಾರಂಭವನ್ನು ನ. ೨೨ ರಂದು ಬೆಳಿಗ್ಗೆ ೧೦-೩೫ ಕ್ಕೆ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಆವರಣದಲ್ಲಿರುವ ಸುವರ್ಣಸೌಧ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸಾಲಿಗ್ರಾಮ ಗಣೇಶ್ ಶೆಣೈ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ ಮತ್ತು ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಸಹಯೋಗದಲ್ಲಿ ನಡೆಯುವ ಈ ಕಾರ್ಯಕ್ರಮದ ದಿವ್ಯ ಸಾನಿಧ್ಯದಲ್ಲಿ ವಿರಕ್ತ ಮಠದ ಚರಮೂರ್ತಿ ಶ್ರೀ ಬಸವಪ್ರಭು ಮಹಾಸ್ವಾಮಿಗಳು ಉಪಸ್ಥಿತರಿದ್ದು ಸಮಾರಂಭದ ಉದ್ಘಾಟನೆಯನ್ನು ಮೇಯರ್ ಬಿ.ಜಿ.ಅಜಯಕುಮಾರ್ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಮಾನ ಮನಸ್ಕರ ಸೇವಾ ಸಮಿತಿ ನೂತನ ಅಧ್ಯಕ್ಷರಾದ ಜಿ. ಅಬ್ದುಲ್ ಸತ್ತಾರ್ ಸಾಹೇಬ್ ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥರಾದ ಜಸ್ಟಿನ್ ಡಿ.ಸೌಜ, ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಬಿ.ಎಂ.ಸದಾಶಿವಪ್ಪ ಶ್ಯಾಗಲೆ, ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷರಾದ ಕೆ.ಹೆಚ್.ಮಂಜುನಾಥ್ ಆಗಮಿಸಲಿದ್ದಾರೆ ಎಂದು ಸಂಸ್ಥೆಯ ಗೌರವ ಅಧ್ಯಕ್ಷರಾದ ಬಕ್ಕೇಶ್ ನಾಗನೂರು ತಿಳಿಸಿದ್ದಾರೆ.
ಮಕ್ಕಳಲ್ಲಿ ವಿದ್ಯಾಭ್ಯಾಸದ ಹಂತದಲ್ಲೇ ಕನ್ನಡ ನಾಡು, ನುಡಿ, ಇತಿಹಾಸ-ಪರಂಪರೆಗಳ ಅರಿವು, ಕಾಳಜಿ ಅಭಿಮಾನ ಮೂಡಿಸುವ ಹಂತದಲ್ಲಿ ಹಮ್ಮಿಕೊಳ್ಳಲಾದ ಈ ಸಮಾರಂಭದಲ್ಲಿ ಪ್ರಶಸ್ತಿಗೆ ಆಯ್ಕೆಯಾದ ಮಕ್ಕಳಿಗೆ ಸಂಸ್ಥೆಯ ಮುತ್ತೈದೆಯರು ಕನ್ನಡ ಕಂಕಣಕಟ್ಟಿ, ಕನ್ನಡದ ತಿಲಕವಿಟ್ಟು, ಕನ್ನಡಾರತಿ ಬೆಳಗಿ ಸಮಾರಂಭದ ವೇದಿಕೆಯಲ್ಲಿ ಗಣ್ಯಮಾನ್ಯರಿಂದ ಮಕ್ಕಳ ತಲೆಯ ಮೇಲೆ ತಿರೀಟವಿಟ್ಟು, ಪುಷ್ಪವೃಷ್ಟಿಯೊಂದಿಗೆ ಚಿನ್ನದ ಲೇಪನದ ಪದಕ, ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರದೊಂದಿಗೆ ಸನ್ಮಾನಿಸಿ ಗೌರವಿಸಲಾಗುವುದು. ಮಾಸ್ಕ್‌ನೊಂದಿಗೆ ಸಾಮಾಜಿಕ ಅಂತರದೊಂದಿಗೆ ಈ ಸಮಾರಂಭ ನಡೆಯಲಿದೆ ಎಂದು ಸಂಸ್ಥೆಯ ಖಜಾಂಚಿ ಟಿ. ಅಜ್ಜೇಶಿ ತಿಳಿಸಿದ್ದಾರೆ.