ನ. 22ರಂದು ಪೊಲೀಸ್ ಕಾನ್ಸ್‍ಸ್ಟೇಬಲ್ ಹುದ್ದೆಗಳಿಗೆ ಲಿಖಿತ ಪರೀಕ್ಷೆ

ಕಲಬುರಗಿ.ನ.20:ಕೆ.ಎಸ್.ಆರ್.ಪಿ./ಐ.ಆರ್.ಬಿ. ಪೊಲೀಸ್ ಕಾನ್ಸ್‍ಸ್ಟೇಬಲ್ 2420 ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳಿಗೆ ನ. 22ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 12.30 ಗಂಟೆಯವರೆಗೆ ಕಲಬುರಗಿ ನಗರದ 13 ಶಾಲಾ-ಕಾಲೇಜುಗಳಲ್ಲಿ ಲಿಖಿತ ಪರೀಕ್ಷೆ ನಡೆಯಲಿದೆ ಎಂದು ಕಲಬುರಗಿ ಪೊಲೀಸ್ ಅಧೀಕ್ಷಕರಾದ ಡಾ. ಸಿಮಿ ಮರಿಯಮ್ ಜಾರ್ಜ್ ತಿಳಿಸಿದ್ದಾರೆ.
ಈ ಲಿಖಿತ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಪುಸ್ತಕ, ಕೈ ಬರಹ ಚೀಟಿಗಳು, ಪೇಜರ್, ಕ್ಯಾಲ್ಕುಲೇಟರ್, ಇಯರ್ ಪೋನ್ ಹಾಗೂ ಮೊಬೈಲ್ ಫೋನ್ ಸೇರಿದಂತೆ ಮತ್ತಿತರ ಯಾವುದೇ ವಸ್ತುಗಳನ್ನು ಪರೀಕ್ಷಾ ಕೇಂದ್ರಗಳಿಗೆ ತರುವುದನ್ನು ನಿಷೇಧಿಸಲಾಗಿದೆ.
ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ತಮ್ಮ ಬೆಲೆ ಬಾಳುವ ವಸ್ತುಗಳನ್ನು ತೆಗೆದುಕೊಂಡು ಬರಬಾರದು. ತಂದಲ್ಲಿ ಇದಕ್ಕೆ ಅಭ್ಯರ್ಥಿಗಳೇ ಜವಾಬ್ದಾರಾಗುತ್ತಾರೆ. ಈ ವಸ್ತುಗಳನ್ನು ಇಡಲು ಯಾವುದೇ ವ್ಯವಸ್ಥೆ ಇರುವುದಿಲ್ಲ. ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಪರೀಕ್ಷಾ ಕೇಂದಕ್ಕೆ ಒಂದು ಗಂಟೆ ಮುಂಚಿತವಾಗಿ ತಮ್ಮ ಪ್ರವೇಶ ಪತ್ರದಲ್ಲಿ ನಮೂದಿಸಿದ ಕಾಲೇಜು ಅಥವಾ ಶಾಲೆಯಲ್ಲಿ ಹಾಜರಿರಬೇಕು. ಅದೇ ರೀತಿ ಅಭ್ಯರ್ಥಿಗಳು ಪ್ರವೇಶ ಪತ್ರದಲ್ಲಿ ತಿಳಿಸಿದ ಸೂಚನೆಗಳು ಹಾಗೂ ಕೋವಿಡ್-19 ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಅವರು ತಿಳಿಸಿದ್ದಾರೆ.