ನ.21ರೊಳಗೆ ಎಲ್ಲಾ ನಾಮಫಲಕಗಳ ಮೇಲೆ ಕನ್ನಡ ಕಡ್ಡಾಯಕ್ಕೆ ಒತ್ತಾಯಿಸಿ ಪ್ರತಿಭಟನೆ

ಮೈಸೂರು, ನ.8:- ಮೈಸೂರು ನಗರದಲ್ಲಿರುವ ಎಲ್ಲಾ ನಾಮಫಲಕಗಳ ಮೇಲೆ ನವೆಂಬರ್ 21ರೊಳಗಡೆ ಕಡ್ಡಾಯವಾಗಿ ಕನ್ನಡದಲ್ಲಿಯೇ ಬರೆದು ಅಳವಡಿಸಲು ಒತ್ತಾಯಿಸಿ ಕನ್ನಡ ಸಂಘಟನೆಯ ನಾಗರೀಕ ಹಿತರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ ನಡೆಯಿತು.
ಜಿಲ್ಲಾಧಿಕಾರಿಗಳ ಕಛೇರಿ ಎದುರು ಇಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಮೈಸೂರು ಬೆಂಗಳೂರು ರಸ್ತೆಯಲ್ಲಿರುವ ಚಿನ್ನದ ಅಂಗಡಿಯಲ್ಲಿ ಕೇರಳದವರಿಗೆ ಕೆಲಸಕೊಟ್ಟು ಕನ್ನಡದವರಿಗೆ ಅನ್ಯಾಯ ಮಾಡಲಾಗುತ್ತಿದೆ. ಜಾಯ್ ಆಲುಕ್ಕಾಸ್, ಭೀಮಾ ಜ್ಯೂವೆಲ್ಲರ್ಸ್‍ಅಂಗಡಿಗಳಲ್ಲಿ ಕೇರಳದಿಂದ ಕರೆತಂದು ಕೆಲಸ ಮಾಡಿಸುತ್ತಿರುವುದು ಗಮನಕ್ಕೆ ಬಂದಿದೆ. ಮೊದಲು ನಮ್ಮ ಕನ್ನಡಿಗರಿಗೆ ಕೆಲಸ ಕೊಟ್ಟು ಬಳಿಕ ಹೊರರಾಜ್ಯದಿಂದ ಬರುವವರಿಗೆ ಕೆಲಸಕೊಡಿ. ಇನ್ನು ಹದಿನೈದು ದಿನಗಳಲ್ಲಿ ಸರಿಪಡಿಸಲಿದ್ದರೆ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಕೆಲವು ಫ್ಯಾಕ್ಟರಿಗಳಲ್ಲಿ ಕೂಡ ಕನ್ನಡಿಗರಿಗೆ ಕೆಲಸವಿಲ್ಲ. ಅಪಾರ್ಟ್ ಮೆಂಟ್ ನಲ್ಲಿ ಕೂಡ ಹೊರರಾಜ್ಯದಿಂದ ಕರೆದುಕೊಂಡು ಬಂದು ಕೆಲಸ ಕೊಡುತ್ತಿದ್ದಾರೆ. ನಮ್ಮ ರಾಜ್ಯದವರಿಗೆ ಮೊದಲು ಕೆಲಸ ಕೊಡಿ. ನವೆಂಬರ್ 21ರೊಳಗೆ ಎಲ್ಲಾ ನಾಮಫಲಕಗಳು ಕನ್ನಡದಲ್ಲಿರಬೇಕು. ಇಲ್ಲದಿದ್ದಲ್ಲಿ ಮಸಿ ಬಳಿಯುವ ಕಾರ್ಯ ಅನಿವಾರ್ಯ ಎಂದರು.
ಪ್ರತಿಭಟನೆಯಲ್ಲಿ ಅಧ್ಯಕ್ಷ ಮಂಜುನಾಥ, ಉಪಾಧ್ಯಕ್ಷ ಲಾಟರಿ ನಾಗರಾಜು, ಮೆಸ್ ಬಾಬು, ಮಾರುತಿ ಚಂದ್ರು, ವಿ.ಗಿರಿಧರ್, ರಾಮಪ್ರಕಾಶ್, ಯೋಗೇಶ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.