ನ.20-ಡಿ.1 ರವರೆಗೆ ತುಂಗಭದ್ರಾ ಪುಷ್ಕರಣಿ ಪವಿತ್ರ ಅವಧಿ

ಕೊರೊನಾ : ಮಂತ್ರಾಲಯ ಮಠಕ್ಕೆ 67 ಕೋಟಿ ಆರ್ಥಿಕ ನಷ್ಟ
ರಾಯಚೂರು.ನ.05- ಕೊರೊನಾ ಮಹಾಮಾರಿಯಿಂದ ಮಂತ್ರಾಲಯ ಶ್ರೀಮಠಕ್ಕೆ ಸುಮಾರು 67 ಕೋಟಿ ರೂ. ಆರ್ಥಿಕ ನಷ್ಟವಾಗಿದೆಂದು ಶ್ರೀಮಠ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಹೇಳಿದರು.
ಅವರಿಂದು ತುಂಗಭದ್ರಾ ಪುಷ್ಕರ ಹಿನ್ನೆಲೆಯಲ್ಲಿ ಮಂತ್ರಾಲಯದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೀಠಾಧಿಪತಿಗಳು ಆರ್ಥಿಕ ನಷ್ಟದ ಹಿನ್ನೆಲೆಯಲ್ಲಿ ಆಂಧ್ರ ಸರ್ಕಾರದ ಸೂಚನೆ ಮೇರೆಗೆ ಹೆಚ್ಚಿನ ವೇತನ ಪಡೆಯುತ್ತಿದ್ದ ಸಿಬ್ಬಂದಿಗಳ ವೇತನ ಕಡಿತಗೊಳಿಸಲಾಗಿದೆ. ಆದರೆ, ಕೆಳ ಹಂತದ ಕಡಿಮೆ ವೇತನ ಪಡೆಯುವ ಯಾವುದೇ ಸಿಬ್ಬಂದಿಯ ವೇತನವನ್ನು ಕಡಿತಗೊಳಿಸಿಲ್ಲವೆಂದು ಸ್ಪಷ್ಟಪಡಿಸಿದ ಅವರು, ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲೂ ಮಠದ ಎಲ್ಲಾ ಪೂಜಾ ಕಾರ್ಯಗಳನ್ನು ವಿಧಿವತ್ತಾಗಿ ನಿರ್ವಹಿಸಿಕೊಂಡು ಸರ್ಕಾರದ ಸೂಚನೆಗೆ ಮೇರೆಗೆ ಭಕ್ತರ ದರ್ಶನಕ್ಕೆ ಇತ್ತೀಚಿಗೆ ಶ್ರೀಮಠದಲ್ಲಿ ಅವಕಾಶ ನೀಡಲಾಗಿದೆ.
ಪವಿತ್ರ ತುಂಗಭದ್ರಾ ನದಿಗೆ ಪುಷ್ಕರಣಿ ಬಂದಿದೆ. ನವೆಂಬರ್ 20 ರಿಂದ ಡಿಸೆಂಬರ್ 1 ಅತ್ಯಂತ ಪವಿತ್ರ ಅವಧಿಯಾಗಿದೆ. ಈ ಪುಷ್ಕರಣಿಯೂ ಇಡೀ ವರ್ಷ ಇರುವುದರಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ನವೆಂಬರ್ 20 ರಂದು ಪುಷ್ಕರಣಿ ನಿಮಿತ್ಯ ಮೆರವಣಿಗೆ ಮೂಲಕ ತುಂಗಭದ್ರಾ ನದಿಗೆ ತೆರಳಿ, ಪೂಜಾ ಕಾರ್ಯಕ್ರಮ ನೆರವೇರಿಸಲಾಗುತ್ತದೆ. ಕೊರೊನಾ ನಿಮಿತ್ಯ ಎಲ್ಲಾ ಮುಂಜಾಗ್ರತಾ ಕ್ರಮಗಳನ್ವಯ ಈ ಮೆರವಣಿಗೆ ನಿರ್ವಹಿಸಲಾಗುತ್ತದೆ.
ಶಾಲೆಗಳು ಆರಂಭಕ್ಕೆ ಸಂಬಂಧಿಸಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪೀಠಾಧಿಪತಿಗಳು, ಈಗಾಗಲೇ ವಿಜ್ಞಾನಿ ಮತ್ತು ತಜ್ಞರು ಕೊರೊನಾ ಮತ್ತೇ ಆವರಿಸುವ ಮುನ್ಸೂಚನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಸರ್ಕಾರ ಹಠಾತ್ ನಿರ್ಧಾರದ ಮೂಲಕ ಮಕ್ಕಳಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಶಾಲಾ, ಕಾಲೇಜು ಆರಂಭಕ್ಕೆ ಸಂಬಂಧಿಸಿ ಮತ್ತಷ್ಟು ಕಾಲ ತಡೆದು, ಕೊರೊನಾ ಹರಡುವಿಕೆ ಸಂಪೂರ್ಣ ಸ್ಥಗಿತಗೊಂಡ ನಂತರ ಈ ಬಗ್ಗೆ ನಿರ್ಧಾರ ಕೈಗೊಳ್ಳುವುದು ಸೂಕ್ತವೆಂದು ತಮ್ಮ ಅಭಿಪ್ರಾಯ ಹೇಳಿದರು.