ನ. 18, 19ಕ್ಕೆ ಲೋಕಕಲ್ಯಾಣಕ್ಕಾಗಿ ಆಧ್ಯಾತ್ಮ ಉತ್ಸವ

ದಾವಣಗೆರೆ, ನ.೧೫;  ಸ್ಪೂರ್ತಿ ಸೇವಾ ಟ್ರಸ್ಟ್, ಶಾಸ್ತ್ರೀಹಳ್ಳಿ ಅಭಯಾಶ್ರಮ, ಶ್ರೀ ಗಾಯತ್ರಿ ಪರಿವಾರ ಹಾಗೂ ಇಸ್ಕಾನ್ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ನ. 18 ಮತ್ತು 19 ರಂದು ಎರಡು ದಿನಗಳ ಕಾಲ ಲೋಕಕಲ್ಯಾಣಕ್ಕಾಗಿ ಶ್ರೀ ರಾಮತಾರಕ ಯಜ್ಞ, ಶ್ರೀ ಗಾಯತ್ರಿ ಮಹಾಯಜ್ಞ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಶ್ರೀಕೃಷ್ಣ ನಾಮಕೀರ್ತನೆ, ಶ್ರೀ ದಾಮೋದರ ದೀಪೋತ್ಸವ ಶ್ರೀ ತುಳಸಿ ಕಲ್ಯಾಣ ಮುಂತಾದ ಧಾರ್ಮಿಕ ಆಧ್ಯಾತ್ಮಿಕ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಸ್ಪೂರ್ತಿ ಸೇವಾ ಟ್ರಸ್ಟ್ನ ಸಂಸ್ಥಾಪಕರಾದ ಬಿ.ಸತ್ಯನಾರಾಯಣ ಮೂರ್ತಿ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು ಕಾರ್ತಿಕ ಹುಣ್ಣಿಮೆಯ ಅಂಗವಾಗಿ ಹಮ್ಮಿಕೊಳ್ಳಲಾದ ಈ ಧಾರ್ಮಿಕ ವಿಧಿ-ವಿಧಾನಗಳ ಪೂಜೆ, ಪುನಸ್ಕಾರಗಳನ್ನು ವೇದಮೂರ್ತಿ ಜಯತೀರ್ಥಾಚಾರ್ ಮತ್ತು ವೇದಮೂರ್ತಿ ಶಂಕರನಾರಾಯಣ ಶಾಸ್ತ್ರಿ ಮತ್ತು ಶಿಷ್ಯ ವೃಂದದವರು ನಡೆಸಿಕೊಡಲಿದ್ದಾರೆ ಎಂದು ಶ್ರೀ ಗಾಯತ್ರಿ ಪರಿವಾರದ ಪ್ರಧಾನ ಕಾರ್ಯದರ್ಶಿ ಸಾಲಿಗ್ರಾಮ ಗಣೇಶ್‌ಶೆಣೈ ತಿಳಿಸಿದ್ದಾರೆ. ನಗರದ ಆರ್.ಹೆಚ್. ಧರ್ಮಶಾಲೆಯ ಹೊರಾಂಗಣದ ಯಜ್ಞ ಶಾಲೆಯಲ್ಲಿ ಶ್ರೀ ರಾಮತಾರಕ ಯಜ್ಞ, ಶ್ರೀ ಗಾಯತ್ರಿ ಮಹಾಯಜ್ಞ ನಡೆಯಲಿದ್ದು, ಛತ್ರದ ಒಳಾಂಗಣದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ. ನ.18ರ ಸಂಜೆ 5-45ಕ್ಕೆ ಗರುಡ ಧ್ವಜಾರೋಹಣ ನಡೆಯಲಿದ್ದು ಸಂಜೆ 6 ರಿಂದ 20ನೇ ವರ್ಷದ ಶ್ರೀರಾಮ ತಾರಕ ಜಪ, ಅಖಂಡ 18 ಗಂಟೆಗಳ ಕಾಲ ನಿರಂತರವಾಗಿ ಜಪಯಜ್ಞ ನಡೆಯಲಿದೆ. 19ರ ಬೆಳಿಗ್ಗೆ 8-45ಕ್ಕೆ ಹೊರಾಂಗಣದ ಯಜ್ಞ ಶಾಲೆಯಲ್ಲಿ ಶ್ರೀ ಗಾಯತ್ರಿ ಮಹಾಯಜ್ಞ, ಶ್ರೀ ರಾಮತಾರಕ ಯಜ್ಞಗಳಿಗೆ ಸಂಕಲ್ಪ ಮಾಡಲಾಗುವುದು.ಮಧ್ಯಾಹ್ನ 12-30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಅಧ್ಯಕ್ಷತೆಯನ್ನು ಶ್ರೀ ಗಾಯತ್ರಿ ಪರಿವಾರದ ಅಧ್ಯಕ್ಷರಾದ ಡಾ. ಸುಶೀಲಮ್ಮ ವಹಿಸಿಕೊಳ್ಳಲಿದ್ದು, ಉದ್ಘಾಟನೆಯನ್ನು ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ದೇವರಮನಿ ಶಿವಕುಮಾರ್ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ದಾವಣಗೆರೆ ಮಹಾನಗರ ಪಾಲಿಕೆಯ ಪೂಜ್ಯ ಮಹಾಪೌರರಾದ ಎಸ್.ಟಿ.ವೀರೇಶ್, ದಾವಣಗೆರೆಯ ಶ್ರೀ ರಾಮಕೃಷ್ಣ ಮಿಷನ್ ಅಧ್ಯಕ್ಷರಾದ ಪರಮಪೂಜ್ಯ ಶ್ರೀ ತ್ಯಾಗೀಶಾನಂದ ಮಹಾರಾಜ್, ದಾವಣಗೆರೆಯ ಇಸ್ಕಾನ್ ಸಂಸ್ಥೆಯ ಮುಖ್ಯಸ್ಥರಾದ ಅವಧೂತ ಚಂದ್ರದಾಸ್ ಹಾಗೂ ದಾವಣಗೆರೆ ಜಿಲ್ಲೆಯ ಶಾಸ್ತ್ರಿಹಳ್ಳಿ ಅಭಯಾಶ್ರಮದ ಅಧ್ಯಕ್ಷರಾದ ಆರ್.ಆರ್.ರಮೇಶ್‌ಬಾಬು ಅಗಮಿಸಲಿದ್ದಾರೆ ಎಂದರು. ಯಾವುದೇ ಜಾತಿ, ಮತ, ಲಿಂಗ ಬೇಧವಿಲ್ಲದೇ ಸಾರ್ವಜನಿಕವಾಗಿ ನಡೆಯುವ ಈ ಆಧ್ಯಾತ್ಮ ಪರಂಪರೆಯನ್ನು ವೈಭವೀಕರಿಸುವ, ಉಳಿಸುವ, ಬೆಳೆಸುವ ನಿಟ್ಟಿನಲ್ಲಿ ಲೋಕಕಲ್ಯಾಣಕ್ಕಾಗಿ ಹಮ್ಮಿಕೊಳ್ಳಲಾದ ಈ ಧಾರ್ಮಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತ ಸಾರ್ವಜನಿಕರು ಆಗಮಿಸಿ ಸಮಾರಂಭವನ್ನು ಯಶಸ್ವಿಗೊಳಿಸಬೇಕಾಗಿ ಪರಿವಾರದ ಕೋಶಾಧ್ಯಕ್ಷರಾದ ಪುರುಷೋತ್ತಮ ಪಟೇಲ್ ವಿನಂತಿಸಿದ್ದಾರೆ.ಗೋಷ್ಠಿಯಲ್ಲಿ ಕೆ.ಹೆಚ್.ಮಂಜುನಾಥ್,  ಭಾವನ್ನಾರಯಣ ಇದ್ದರು.