ನ.14ರಿಂದ 20ರವರೆಗೆ ಸಹಕಾರ ಸಪ್ತಾಹದ ಪ್ರಯುಕ್ತ ವಿಶೇಷ ಉಪನ್ಯಾಸ

ದಾವಣಗೆರೆ. ನ.೧೨: ನಗರದ ಎಂಸಿಸಿ ಎ ಬ್ಲಾಕ್ ನ‌ ವಿನೋಬನಗರದ ದಾವಣಗೆರೆ ಹರಿಹರ ಅರ್ಬನ್ ಬ್ಯಾಂಕ್ ಸಮುದಾಯ ಭವನದಲ್ಲಿ ಬೆಳಿಗ್ಗೆ 11ಗಂಟೆಗೆ 69ನೇ ಅಖಿಲ ಭಾರತ ಸಹಕಾರ ಸಪ್ತಾಹ ಆಯೋಜಿಸಲಾಗಿದೆ. ನ.20ರವರೆಗೆ ಜಿಲ್ಲೆಯ ವಿವಿಧೆಡೆ ಉಪನ್ಯಾಸ ಜರುಗಲಿದೆ ಎಂದು ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಸಿರಿಗೆರೆ ರಾಜಣ್ಣ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮವನ್ನು ಸಂಸದ ಡಾ. ಜಿ. ಎಂ. ಸಿದ್ದೇಶ್ವರ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಿರಿಗೆರೆ ರಾಜಣ್ಣ ವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಶಾಸಕರಾದ ಡಾ. ಶಾಮನೂರು ಶಿವಶಂಕರಪ್ಪ, ಎಸ್. ಎ.‌ರವೀಂದ್ರನಾಥ್, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಜೆ. ಆರ್. ಷಣ್ಮುಖಪ್ಪ, ಜಗದೀಶ್ ಬಣಕಾರ್ ಪಾಲ್ಗೊಳ್ಳಲಿದ್ದಾರೆ ಎಂದರು. ನ. 14 ರಿಂದ 20ರವರೆಗೆ ಸಹಕಾರಿ ಸಪ್ತಾಹ ದಿನಾಚರಣೆ ನಡೆಸಲಾಗುತ್ತಿದ್ದು, ಭಾರತ -75 ಸಹಕಾರ ಸಂಸ್ಥೆಗಳ ಬೆಳವಣಿಗೆ ಮತ್ತು ಮುಂದಿನ ಭವಿಷ್ಯ ಕುರಿತಂತೆ ವಿವಿಧ ವಿಚಾರಗಳ ಕುರಿತಂತೆ ಉಪನ್ಯಾಸ ಏರ್ಪಡಿಸಲಾಗಿದೆ ಎಂದು ಹೇಳಿದರು. ನ.14 ರಂದು ದಾವಣಗೆರೆ – ಹರಿಹರ ಅರ್ಬನ್ ಸಹಕಾರ ಸಮುದಾಯ ಭವನದಲ್ಲಿ “ಸಹಕಾರ ಸಂಸ್ಥೆಗಳಲ್ಲಿ ವ್ಯಾಪಾರ ಸರಳೀಕರಣ, ರಫ್ತು ವೃದ್ಧಿಗಾಗಿ ಜೆಮ್ ಪೋರ್ಟಲ್‌ಬಳಕೆ, 15  ರಂದು ಚನ್ನಗಿರಿಯ ಶ್ರೀ ಮೌದ್ಗಲ್ ಆಂಜನೇಯ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಸಹಕಾರಿ ಮಾರುಕಟ್ಟೆ, ಗ್ರಾಹಕ, ರೂಪಾಂತರ ಮತ್ತು ಮೌಲ್ಯವರ್ಧನೆ, 16ರಂದು ನ್ಯಾಮತಿಯ ಸುರಹೊನ್ನೆಯಲ್ಲಿನ  ಶಿವ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಆವರಣದಲ್ಲಿ ಸಹಕಾರ ಶಿಕ್ಷಣ, ವೃತ್ತಿಪರ ನಿರ್ವಹಣೆಯನ್ನು ಮುಖ್ಯವಾಹಿನಿಗೆ ತರಲು ಪುನರ್ ನಿರ್ಮಿಸುವುದು, 17ರಂದು ದಾವಣಗೆರೆಯ ಐಗೂರಿನಲ್ಲಿನ ಶ್ರೀ ಬಸವೇಶ್ವರ ಪ್ರೌಢಶಾಲೆಯಲ್ಲಿ ಆವಿಷ್ಕಾರ ಪೋಷಣೆ, ಸ್ಮಾರ್ಟ್ ಆಪ್ ಗಳಿಗೆ ಉತ್ತೇಜನ ಮತ್ತು ತಂತ್ರಜ್ಞಾನದ ಉನ್ನತೀಕರಣದಲ್ಲಿ ಸಹಕಾರ ಸಂಸ್ಥೆಗಳ ಪಾತ್ರ, 18ರಂದು ಜಗಳೂರಿನ ವಾಲ್ಮೀಕಿ ಭವನದಲ್ಲಿ ಉದ್ಯಮಶೀಲತೆ ಅಭಿವೃದ್ಧಿ, ಸಾರ್ವಜನಿಕ, ಖಾಸಗಿ, ಸಹಕಾರಿ ಅಹಭಾಗಿತ್ವವನ್ನು ಬಲಗೊಳಿಸುವುದು, 19ರಂದು ಹರಿಹರ ತಾಲೂಕಿನ ಕಮಲಾಪುರ ಗ್ರಾಮದ ಶ್ರೀ ಬೀರಲಿಂಗೇಶ್ವರ ಸಮುದಾಯ ಭವನದಲ್ಲಿ ಯುವಜನ, ಮಹಿಳಾ ಮತ್ತು ಅಬಲವರ್ಗ ಮತ್ತು ಆರೋಗ್ಯಕ್ಕಾಗಿ ಸಹಕಾರ ಸಂಸ್ಥೆ ಹಾಗೂ 20ರಂದು ಹೊನ್ನಾಳಿಯ ಟಿಎಪಿಸಿಎಂಎಸ್ ನಲ್ಲಿ ಆರ್ಥಿಕ ಸೇರ್ಪಡೆ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಸ್ಥೆಗಳ ಡಿಜಲೀಕರಣ ಮತ್ತು ಸಹಕಾರ ಸಂಸ್ಥೆಗಳ ದತ್ತಾಂಶಗಳ ಬಲಪಡಿಸುವಿಕೆ ಕುರಿತಂತೆ ವಿಶೇಷ ಉಪನ್ಯಾಸ ನೀಡುವರು ಎಂದು ವಿವರಿಸಿದರು. ಗೋಷ್ಠಿಯಲ್ಲಿ ದಾವಣಗೆರೆ- ಹರಿಹರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಎನ್. ಎ. ಮುರುಗೇಶ್, ಜಿಲ್ಲಾ ಸಹಕಾರ ಒಕ್ಕೂಟದ ಉಪಾಧ್ಯಕ್ಷ ಬೇತೂರು ರಾಜಣ್ಣ, ಡಿ. ಎಂ.‌ ಮುರುಗೇಂದ್ರಯ್ಯ, ಸಿಇಒ ಸಂತೋಷ್ ಕುಮಾರ್, ಜಗದೀಶ್ ಮತ್ತಿತರರು ಹಾಜರಿದ್ದರು.