ನ.14ರಿಂದ ತೆಲಸಂಗದಲ್ಲಿ ವೃತ್ತಿ ರಂಗಭೂಮಿ ಕಲಾವಿದರಿಂದ ಸರಣಿ ನಾಟಕ ಪ್ರದರ್ಶನ

ಅಥಣಿ :ನ.13: ವೃತ್ತಿ ರಂಗಭೂಮಿಯ ಉಳಿಯಬೇಕಾದರೆ ಹೊಸ ಚಿಂತನೆಗಳ ಅಗತ್ಯವಿದ್ದು, ಹೊಸ ನಾಟಕಗಳ ರಚನೆ, ಕಲಾವಿದರ ಸೃಷ್ಟಿ ಸೇರಿದಂತೆ ಪ್ರೆಕ್ಷಕರ ಗಮನ ಸೆಳೆಯಲು ಹೊಸ ಹೊಸ ಪ್ರಯೋಗಗಳ ಚಿಂತನೆ ಮಾಡುವ ನಿಟ್ಟಿನಲ್ಲಿ ವೃತ್ತಿ ರಂಗಭೂಮಿ ಮಾಲೀಕರು ಪ್ರಯತ್ನಶೀಲರಾಗಬೇಕೆಂದು ಡಾ.ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಕಲಾ ಸಂಘದ ಸಂಚಾಲಕ ನ್ಯಾಯವಾದಿ ಅಮೋಘ ಖೊಬ್ರಿ ಕರೆ ನೀಡಿದರು.
ಅವರು ತಾಲೂಕಿನ ತೆಲಸಂಗ ಗ್ರಾಮದ ಅಂಬೇಡ್ಕರ್ ವೃತ್ತದ ಬಳಿ ಹಾಜಿಮಸ್ತಾನ ದರ್ಗಾದ ಮುಜಾವರ ಜಾಗೆಯಲ್ಲಿ ಹಾಕಲಾದ ಶ್ರೀ ಗುರು ಕುಮಾರೇಶ್ವರ ನಾಟ್ಯ ಸಂಘ ಹಾನಗಲ್ ಇವರ ರಂಗಮಂದಿರ(ನಾಟಕ ಥೇಟರ್)ದಲ್ಲಿ ನ.14ರಿಂದ ರಾತ್ರಿ 9:30ಕ್ಕೆ ಪ್ರದರ್ಶನವಾಗಲಿರುವ ನಕ್ಕಿದ್ದು ಅರಮನೆ ಸಿಕ್ಕಿದ್ದು ಸೆರೆಮನೆ ಎಂಬ ನಾಟಕ ಪ್ರದರ್ಶನದ ಪ್ರಚಾರಪತ್ರಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿ, ಹಳೆಯ ಪರಿಕರಗಳನ್ನು ಅಳವಡಿಸಿಕೊಂಡು ಹೊಸ ನಾಟಕಗಳು ರಚನೆಯಾಗಬೇಕಾಗಿದೆ. ಹೊಸ ಕೃತಿಗಳನ್ನು ವೃತ್ತಿರಂಗಭೂಮಿಗೆ ಅಳವಡಿಸಿಕೊಳ್ಳಬೇಕು. ಅಲ್ಲದೆ, ನಾಟಕ ಕಂಪನಿಗಳು ಕ್ಯಾಂಪ್ ಹಾಕಿದ ಕಡೆ ಸಂಜೆ ವೇಳೆ ನಾಟಕದ ಅಭಿನಯ, ಹಗಲಿನಲ್ಲಿ ಕೆಲ ಗಂಟೆ ಆಯಾ ಪ್ರದೇಶದ ಗ್ರಾಮೀಣ ಯುವಕರಿಗೆ ನಾಟಕ ರಚನೆ, ಅಭಿನಯ, ನಿರ್ದೇಶನದ ತರಬೇತಿ ನೀಡಬೇಕು. ಹೊಸ ಚಿಂತನೆಗಳನ್ನು ಅಳವಡಿಸಿಕೊಂಡರೆ ಹೊಸ ಕಲಾವಿದರು, ಹೊಸ ಪ್ರೇಕ್ಷಕರು ಹುಟ್ಟಿಕೊಳ್ಳುತ್ತಾರೆ, ವೃತ್ತಿ ರಂಗಭೂಮಿಯನ್ನು ಜನ ಕೈಬಿಡುವುದಿಲ್ಲ. ನಮ್ಮ ನಾಡಿನ ಸಂಸ್ಕøತಿಯ ಶಕ್ತಿ ನಾಟಕ ಮತ್ತು ಕಲಾವಿದರು ಎಂದರು.
ವೃತ್ತಿ ರಂಗಭೂಮಿ ಕಲಾವಿದ ಶ್ರೀಧರ ಹೆಗಡೆ ಮಾತನಾಡಿ, ವೃತ್ತಿ ರಂಗಭೂಮಿ ನಾಟಕ ಕಂಪನಿಗಳ ನಿರ್ವಹಣೆ ಖರ್ಚು ಹೆಚ್ಚಿರುವುದರಿಂದ ಗ್ರಾಮೀಣ ಪ್ರದೇಶಕ್ಕೆ ಥೇಟರ್ ಹಾಕಲು ಮಾಲೀಕರುಗಳು ಹಿಂದೇಟು ಹಾಕುತ್ತಾರೆ. ಇಂತಹದರಲ್ಲಿ ಗ್ರಾಮೀಣ ಪ್ರದೇಶದ ಹೋಬಳಿ ಗ್ರಾಮವಾದ ತೆಲಸಂಗದಲ್ಲಿ ನಾಟಕ ಕಂಪನಿ ನಡೆಸುವ ಸಾಹಸಕ್ಕೆ ಕೈ ಹಾಕಿದ್ದೇವೆ. ನಮ್ಮ ಸಂಸ್ಕೃತಿಯ ಜೀವನಾಡಿ ಆಗಿರುವ ಗ್ರಾಮೀಣ ಜನರು ನ.14ರಿಂದ ನಿತ್ಯ ನಡೆಯುವ ನಾಟಕ ಪ್ರದರ್ಶನಗಳಿಗೆ ಬಂದು ಪೆÇ್ರೀತ್ಸಾಹಿಸುವ ಮೂಲಕ ಕಲೆ ಮತ್ತು ಕಲಾವಿದರನ್ನು ಉಳಿಸಿ ಬೆಳೆಸಿರಿ ಎಂದರು.
ಈ ಸಂದರ್ಭದಲ್ಲಿ ಡಾ.ಪ.ಪು.ಕ.ಗವಾಯಿಗಳ ರಂಗ ಸಂಸ್ಥೆಯ ಅಧ್ಯಕ್ಷ ಡಾ.ಬಿ.ಎಸ್.ಕಾಮನ್, ಸುರೇಶ ಸನಗೊಂಡ, ಅಪ್ಪು ಜಮಾದರ, ಶಿವಯೋಗಿ ಹತ್ತಿ, ಅಶೋಕ ಪರುಶೆಟ್ಟಿ, ರಾಜು ಹಡಪದ, ಶಂಬು ಸಿಂದಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.