ನ.12ರಿಂದ ವಂಡರ್ ಲಾ ಪುನಾರಂಭ: ಕೊರೊನಾ ವಾರಿಯರ್ಸ್‌ ಗೆ ಉಚಿತ ಪ್ರವೇಶ

ಬೆಂಗಳೂರು, ಅ 31- ಮಾರಕ‌ ಕೊರೊನಾ ಸೋಂಕಿನಿಂದ ಮುಚ್ಚಲಾಗಿದ್ದ ವಂಡರ್ ಲಾ ಅಮ್ಯೂಸ್ ಮೆಂಟ್ ಪಾರ್ಕ್ ಅನ್ನು ನವೆಂಬರ್ 12 ರಿಂದ ಸಾರ್ವಜನಿಕರಿಗೆ ಲಭ್ಯವಾಗಲಿದೆ.

ವಂಡರ್‌ ಲಾ ಥೀಮ್ ಪಾರ್ಕ್ ಮತ್ತು ರೆಸಾರ್ಟ್‌ ಬೆಂಗಳೂರಿನಲ್ಲಿ ಪುನಃ ಕಾರ್ಯಚಟುವಟಿಕೆ ಆರಂಭಿಸಲಿದೆ. ವಿಶೇಷವಾಗಿ ಕೋವಿಡ್ ವಾರಿಯರ್‌ಗಳಿಗೆ ಮೊದಲನೇ ವಾರ ಉಚಿತ ಪ್ರವೇಶ ಒದಗಿಸಲಾಗುವುದು. ಈ ಮೂಲಕ 12,000ಕ್ಕೂ ಅಧಿಕ ಕೋವಿಡ್‌ ವಾರಿಯರ್‌ಗಳು ಮತ್ತು ಅವರ ಕುಟುಂಬ ಸದಸ್ಯರು ಉಚಿತ ಪಾಸ್‌ ಪಡೆಯಲಿದ್ದಾರೆ. ವಂಡರ್ ಲಾ ವ್ಯವಸ್ಥಾಪಕ ಮಂಡಳಿ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆ ತಿಳಿಸಿದೆ.

ನ. 9, 2020ರಿಂದ ನ.12ರವರೆಗೆ ವಂಡರ್ ಲಾ ಪಾರ್ಕ್ ವಿಶೇಷವಾಗಿ ಕೋವಿಡ್‌ ವಾರಿಯರ್‌ಗಳಿಗೆ ಅವಕಾಶ ಕಲ್ಪಿಸಲಾಗಿದೆ. ಮುಂಚೂಣಿ ವಾರಿಯರ್‌ಗಳು ಹಾಗೂ ಅವರ ಕುಟುಂಬ ಸದಸ್ಯರು ಪಾರ್ಕ್‌ನಲ್ಲಿ ಲಭ್ಯವಿರುವ ಎಲ್ಲಾ ರೈಡ್‌ಗಳಿಗೆ ಪ್ರವೇಶ ಪಡೆಯಬಹುದು ಮತ್ತು ಆಹಾರ-ಪಾನೀಯಗಳನ್ನು ಆನಂದಿಸಬಹುದಾಗಿದೆ ಎಂದು ವಂಡರ್ ಲಾದ ವ್ಯವಸ್ಥಾಪಕ ನಿರ್ದೇಶಕ ಅರುಣ್ ಚಿಟ್ಟಿಪಳ್ಳಿ ಪ್ರಜಟಣೆಯಲ್ಲಿ ತಿಳಿಸಿದ್ದಾರೆ.

ನವೆಂಬರ್ 12, 2020ರಿಂದ ವಂಡರ್‌ ಲಾ ಪಾರ್ಕ್ ಸಾರ್ವಜನಿಕರಿಗಾಗಿ ತೆರೆಯಲಿದ್ದು, ಪ್ರತಿ ಶುಕ್ರವಾರದಿಂದ ಭಾನುವಾರದವರೆಗೆ ಕಾರ್ಯನಿರ್ವಹಿಸಲಿದೆ. ಪ್ರವೇಶದ ಪಾಸ್‌ಗಳನ್ನು ಆನ್‌ಲೈನ್‌ ಮೂಲಕವೇ ಒದಗಿಸಲಾಗುತ್ತದೆ.

ಕೊರೊನಾ ಸೋಂಕು ತಡೆಗೆ ಕಳೆದ ಆರೇಳು ತಿಂಗಳಿಂದ ಮುಚ್ವಲ್ಕಟ್ಟಿದ್ದ ವಂಡರ್ ಲಾ ಆರಂಭವಾಗುತ್ತಿದೆ. ಇದರಿಂದಾಗಿ ಮೋಜು ಮಸ್ತಿ ಮಾಡಲು ಸಾರ್ವಜನಿಕರಿಗೆ ಅವಕಾಶ ಸಿಕ್ಕಂತಾಗಿದೆ.