ನ. 12ರಂದು 2ಎ  ಮೀಸಲಾತಿ ಹಕ್ಕೊತ್ತಾಯಕ್ಕೆ ಹೊಸಪೇಟೆಯಲ್ಲಿ ಬೃಹತ್ ಸಮಾವೇಶ – ಬಾವಿಬೆಟ್ಟಪ್ಪ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ನ. 7 :- ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಹಕ್ಕೊತ್ತಾಯ ಬೃಹತ್ ಸಮಾವೇಶ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ವಿಜಯೋತ್ಸವ ಕಾರ್ಯಕ್ರಮವನ್ನು ಹೊಸಪೇಟೆಯ ಸಹಕಾರಿ ಕ್ರೀಡಾಂಗಣದಲ್ಲಿ ನ.12 ರಂದು ಬೆಳಗ್ಗೆ 11 ಗಂಟೆಗೆ ಹಮ್ಮಿಕೊಂಡಿದ್ದು, ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ವೀರಶೈವ ಪಂಚಮಸಾಲಿ ಸಮುದಾಯ ಸಂಘಟನೆಯ ರಾಜ್ಯ ಗೌರವಾಧ್ಯಕ್ಷ ಬಾವಿ ಬೆಟ್ಟಪ್ಪ ಕೋರಿದರು.
ತಾಲೂಕಿನ ಎಂ.ಬಿ.ಅಯ್ಯನಹಳ್ಳಿಯ ಸ್ವಾಮಿ ವಿವೇಕಾನಂದ ಕಾಲೇಜಿನಲ್ಲಿ ಭಾನುವಾರ ನಡೆದ ಸಮುದಾಯದ ಪೂರ್ವಭಾವಿ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಹೊಸಪೇಟೆಯಲ್ಲಿ ನಡೆಯುವ ಸಮಾವೇಶದ ನೇತೃತ್ವವನ್ನು ಹರಿಹರ ಪಂಚಮಸಾಲಿ ಪೀಠಾಧ್ಯಕ್ಷ ಶ್ರೀ ವಚನಾನಂದ ಸ್ವಾಮೀಜಿ ವಹಿಸಲ್ಲಿದ್ದು, ಕೊಟ್ಟೂರು ಸಂಸ್ಥಾನ ಮಠದ ಸಂಗನಬಸವ ಸ್ವಾಮೀಜಿಯವರು ಮೆರವಣಿಗೆ ಹಾಗೂ ಕುಂಭಮೇಳಕ್ಕೆ ಚಾಲನೆ ನೀಡಲಿದ್ದಾರೆ. ಅಲ್ಲದೆ, ಸಚಿವರು, ಸಂಸದರು, ಎಂಎಲ್ಸಿ ಸೇರಿ ಅನೇಕ ನಾಯಕರು ಭಾಗವಹಿಸಲಿದ್ದು, ಎಂಟು ಸಾವಿರಕ್ಕೂ ಅಧಿಕ ಜನಕ್ಕೆ ಭವ್ಯವಾದ ವೇದಿಕೆ ಸಿದ್ದಗೊಳ್ಳಲಿದೆ ಎಂದರು. ಹೀಗಾಗಿ, ಜಿಲ್ಲೆಯ ಎಲ್ಲಾ ಹಳ್ಳಿಗಳಿಂದಲೂ ಸಮುದಾಯದ ಮುಖಂಡರು, ಮಹಿಳೆಯರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.ಸುಮಾರು 3 ದಶಕದಿಂದಲೂ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸಲು ಒತ್ತಾಯಿಸುತ್ತಿದ್ದು, ಇದೀಗ ಸಿಎಂ ಬಸವರಾಜ ಬೊಮ್ಮಾಯಿ ಅವರು ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ಭರವಸೆ ಇದೆ. ಈಗಾಗಲೇ ಹಿಂದುಳಿದ ವರ್ಗಗಳ ಆಯೋಗದಿಂದ ವಿಜಯನಗರ, ಬಳ್ಳಾರಿ ಸೇರಿ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಕುಲಶಾಸ್ತ್ರ ಅಧ್ಯಯನವನ್ನು ನಡೆಸುತ್ತಿದೆ. ಈ ಕುಲಶಾಸ್ತ್ರ ಅಧ್ಯಯನದ ಆಧಾರದಲ್ಲಿ ಕಾನೂನು ತೊಡಕಾಗದಂತೆ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ದೊರೆಯುವ ವಿಶ್ವಾಸ ಹೆಚ್ಚಾಗಿದೆ.ಎಂದು ಬಾವಿಬೆಟ್ಟಪ್ಪ ತಿಳಿಸಿದರು.
ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ವಿಜಯನಗರ ಜಿಲ್ಲಾಧ್ಯಕ್ಷ ಪ್ರಕಾಶ್ ಪಾಟೀಲ್ ಮಾತನಾಡಿ, ವೀರಶೈವ ಲಿಂಗಾಯತ ಸಮುದಾಯದಲ್ಲಿರುವ 32ಕ್ಕೂ ಅಧಿಕ ಒಳ ಪಂಗಡಗಳಿಗೂ 2ಎ ಮೀಸಲಾತಿ ನೀಡುವಂತೆ ಒತ್ತಾಯಿಸುತ್ತಿದ್ದು, ಪಂಚಮಸಾಲಿ ಲಿಂಗಾಯತ ಸಮುದಾಯವು ಹಿರಿಯಣ್ಣನ ಸ್ಥಾನದಲ್ಲಿ ನಿಂತು ಹಕ್ಕೊತ್ತಾಯದ ಹೋರಾಟ  ಮಾಡಲಿದೆ ಎಂದು ತಿಳಿಸಿದರು.
ಪಂಚಮಸಾಲಿ ಸಮುದಾಯದ ಹಿರಿಯ ಮುಖಂಡ ಹಾಗೂ ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಗುಂಡುಮುಣುಗು ಕೆ. ತಿಪ್ಪೇಸ್ವಾಮಿ ಮಾತನಾಡಿದರು. ಈ ಸಂದರ್ಭದಲ್ಲಿ ಸಮುದಾಯದ ಮುಖಂಡರಾದ ಎಂ.ಬಿ.ಅಯ್ಯನಹಳ್ಳಿ ಎಚ್. ಚಿದಾನಂದಪ್ಪ, ಸಂಘದ ತಾಲೂಕು ಘಟಕದ ಅಧ್ಯಕ್ಷ ಹುರುಳಿಹಾಳು ಎಚ್. ರೇವಣ್ಣ, ಹಗರಿಬೊಮ್ಮನಹಳ್ಳಿ ತಾಲೂಕು ಅಧ್ಯಕ್ಷ ಅಕ್ಕಿ ಶಿವಕುಮಾರ್, ತಾಲೂಕು ಪ್ರಧಾನ ಕಾರ್ಯದರ್ಶಿ ಹುಲಿಕೆರೆ ರಮೇಶ್ ಗೌಡ, ಬೆಳ್ಳಕಟ್ಟೆ ಕಲ್ಲೇಶ್ ಗೌಡ, ಕೊಟ್ಟಯ್ಯಗಳ ಯರ್ರಿಸ್ವಾಮಿ, ಕೋಟಿಲಿಂಗನಗೌಡ, ಬಣವಿಕಲ್ಲು ಯರ್ರಿಸ್ವಾಮಿ ಲಿಂಗನಗೌಡ, ಗಿರೀಶ್, ಟಿ.ಕಲ್ಲಹಳ್ಳಿ ಸಿದ್ದನಗೌಡ ಸೇರಿ ಮಹಿಳಾ ಘಟಕದ ಪದಾಧಿಕಾರಿಗಳು ಇದ್ದರು.
ಸುದ್ದಿಗೋಷ್ಠಿಗೂ ಮುನ್ನ ಹೊಸಪೇಟೆಯಲ್ಲಿ ನಡೆಯುವ ಬೃಹತ್ ಸಮಾವೇಶದ ಪೋಸ್ಟರ್ ಗಳನ್ನು ಪಂಚಮಸಾಲಿ ಸಮುದಾಯದ ಮುಖಂಡರು ಬಿಡುಗಡೆಗೊಳಿಸಿದರು.