ನ.11ರಿಂದ ಎರಡು ದಿನಗಳ ಕಾಲ ಕಂಪ್ಲಿಗೆ ನೀರು ಪೂರೈಕೆಯಲ್ಲಿ ವ್ಯತ್ಯಯ

ಕಂಪ್ಲಿ, ನ.9: ಕಂಪ್ಲಿ-ಕೋಟೆ ಪ್ರದೇಶದಲ್ಲಿರುವ ಜಾಕ್‍ವೆಲ್‍ನ ನೀರು ಸರಬರಾಜು ಘಟಕದಲ್ಲಿ ಹಳೆಯ ಮೋಟಾರ್‍ಗಳನ್ನು ತೆರವುಗೊಳಿಸಿ ಹೊಸ ಮೋಟಾರ್ ಅಳವಡಿಕೆ ಕಾಮಗಾರಿ ಕೈಗೊಳ್ಳುವ ಹಿನ್ನೆಲೆ ನ.11ರ ಬುಧವಾರ ಮತ್ತು ನ.12ರ ಗುರುವಾರ ಸೇರಿ ಒಟ್ಟು 2 ದಿನಗಳವರೆಗೂ ಪಟ್ಟಣದಲ್ಲಿ ನೀರು ಪೂರೈಕೆ ಇರುವುದಿಲ್ಲ ಎಂದು ಪುರಸಭೆ ಮುಖ್ಯಾಧಿಕಾರಿ ರಮೇಶ್ ಬಡಿಗೇರ್ ತಿಳಿಸಿದರು.
ಪಟ್ಟಣದ ಪಂಪ್‍ಹೌಸ್ ಆವರಣದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಸಭೆಯಲ್ಲಿ ಮಾತನಾಡಿದರು.
ಕೆಯುಐಡಿಎಫ್‍ಸಿ ಅಡಿ ಜಾಕ್‍ವೆಲ್‍ನಲ್ಲಿ ಹಳೆಯ ಮೋಟಾರ್ ತೆಗೆದು 150 ಎಚ್‍ಪಿ ಸಾಮರ್ಥ್ಯವುಳ್ಳ ಹೊಸ ಮೋಟಾರ್‍ಗಳನ್ನು ಅಳವಡಿಸಲಾಗುವುದು. ನೀರು ಶುದ್ಧೀಕರಣ ಘಟಕದಲ್ಲಿಯೂ ಮೋಟಾರ್ ಅಳವಡಿಕೆಗಾಗಿ ವಿದ್ಯುತ್ ಕಾಮಗಾರಿಗಾಗಿ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಪಟ್ಟಣದಲ್ಲಿ ನೀರು ಸರಬರಾಜು ಮಾಡಲಾಗುವುದಿಲ್ಲ. ವಾರ್ಡ್‍ಗಳಲ್ಲಿ ಅಗತ್ಯವಿರುವ ಕಡೆ ನೀರು ಪೂರೈಕೆಗಾಗಿ ಪರ್ಯಾಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ಪುರಸಭೆ ಅಧ್ಯಕ್ಷೆ ಶಾಂತಲಾ ವಿ.ವಿದ್ಯಾಧರ್, ಸದಸ್ಯರಾದ ಸಿ.ಆರ್.ಹನುಮಂತ, ವಿ ಎಲ್ ಬಾಬು, ಎನ್.ರಾಮಾಂಜನೇಯಲು, ಭಟ್ಟ ಪ್ರಸಾದ್, ಎಸ್.ಎಂ.ನಾಗರಾಜ್, ಹೂಗಾರ್ ರಮೇಶ್, ವೀರಾಂಜನೇಯಲು, ಕೆ.ಎಸ್.ಚಾಂದ್‍ಭಾಷ, ಟಿ.ವಿ.ಸುದರ್ಶನರೆಡ್ಡಿ, ಮುಖಂಡರಾದ ಜಿ.ಸುಧಾಕರ್, ರಾಘವೇಂದ್ರ, ಜೆಇ ಮಧುಮತಿ, ಸೈಟ್ ಇನ್‍ಚಾರ್ಜ್ ಎಚ್.ಸೋಮಶೇಖರ ರೆಡ್ಡಿ, ಸೈಟ್ ಎಇ ಸಂತೋಷ್ ಕುಮಾರ್ ಸೇರಿ ಅನೇಕರಿದ್ದರು.