ನ.10, 11ರಂದು ಡಾ.ರಾಮರಾವ್ ಮಹಾರಾಜರ ಅಸ್ಥಿಪೂಜೆ,ದರ್ಶನ, ಮಂದಿರದ ಭೂಮಿಪೂಜೆ

ಬೀದರ, ನ.09: ಇತ್ತೀಚೆಗೆ ಪೌರಾದೇವಿಯಲ್ಲಿ ದೈವಾಧೀನರಾದ ಬಂಜಾರಾ ಸಮಾಜದ ಧರ್ಮಗುರು, ಮಹಾನ್ ತಪಸ್ವಿ, ಸ್ವರ್ಗೀಯ ಡಾ.ರಾಮರಾವ್ ಮಹಾರಾಜರ ಅಸ್ಥಿ ಪೂಜೆ ಮತ್ತು ದರ್ಶನ, ಅವರ ಮಂದಿರದ ಭೂಮಿ ಪೂಜೆ ಮತ್ತು ಶೃದ್ಧಾಂಜಲಿ ಕಾರ್ಯಕ್ರಮಗಳು ಇದೇ ನವೆಂಬರ್ 10 ಮತ್ತು 11 ರಂದು ನಡೆಯಲಿವೆ ಎಂದು ಪಶು ಸಂಗೋಪನೆ, ವಕ್ಫ್, ಹಜ್ ಹಾಗೂ ಬೀದರ-ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ ತಿಳಿಸಿದ್ದಾರೆ.

ಬಾಲಬೃಹ್ಮಚಾರಿಯಾಗಿದ್ದ ಶ್ರೀ ರಾಮರಾವ ಮಹಾರಾಜರು ಸಂತ ಸೇವಾಲಾಲ್ ಮಹಾರಾಜರ ನಂತರದ ಬಂಜಾರ ಸಮುದಾಯ ಏಕೈಕ ಧರ್ಮಗುರುಗಳಾಗಿದ್ದರು. 10ನೇ ವಯಸ್ಸಿಗೆ ಸನ್ಯಾಸ ದೀಕ್ಷೆ ಸ್ವೀಕರಿಸಿದ ಶ್ರೀಗಳು ತಮ್ಮ ಅಂತಿಮ ದಿನದ ವರೆಗೂ ನಿರಾಹಾರಿಗಳಾಗಿದ್ದರು. 50ರ ದಶಕದಿಂದೀಚೆಗೆ ಭಾರತದಾದ್ಯಂತ ಸಂಚರಿಸಿ ಬಂಜಾರಾ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಅಪಾರ ಶ್ರಮ ವಹಿಸಿದ್ದರು. ಸಮಾಜದಲ್ಲಿ ಜಾಗೃತಿ ಮೂಡಿಸಿ ಅನಕ್ಷರತೆ ಅಳಿಸಲು ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ಕೊಟ್ಟಿದ್ದರು. ಸಮಾಜದ ಜನ ನೆಲೆಸುವ ಪ್ರತಿ ತಾಂಡಾಗಳಿಗೆ ಭೇಟಿ ನೀಡಿ ಸಮಾಜದ ಜನ ಗೌರವಪೂರ್ವಕವಾಗಿ ಬದುಕುವುದನ್ನು ಕಲಿಸಿಕೊಟ್ಟರು. ಅವರ ಮಾರ್ಗದರ್ಶನದಿಂದಲೇ ನಮ್ಮ ಸಮಾಜವನ್ನು ಸರಿದಾರಿಗೆ ತರುವಲ್ಲಿ ಯಶಸ್ವಿಯಾದರು. ಬಂಜಾರಾ ಭಾಷೆಗೆ ಈಗಲೂ ಲಿಪಿಯಿಲ್ಲ, ಕೇವಲ ಭಾಷೆಯ ಮೂಲಕವೇ ಸದ್ಗುರುಗಳು ತಮ್ಮ ಸಂದೇಶಗಳನ್ನು ಸಾರುತ್ತಿದ್ದರು. ಅವರ ತೀಕ್ಷ್ಣವಾದ ಸಂದೇಶಗಳು ಬಂಜಾರಾ ಸಮುದಾಯದವರಿಗೆ ವೇದವಾಕ್ಯಗಳಾಗಿದ್ದವು.

ಇಂತಹ ಸದ್ಗುರುಗಳ ಆಶೀರ್ವಾದ ಸದಾ ಸಮಾಜದ ಮೇಲಿರಲಿ ಎನ್ನುವ ಉದಾತ್ತ ಧ್ಯೇಯದೊಂದಿಗೆ ದಿ.10 ರಂದು ಸಾಯಂಕಾಲ ಆರಂಭಗೊಂಡು ರಾತ್ರಿಯಿಡೀ ಭಜನೆ, ಕೀರ್ತನೆ, ಅವರ ಸಂದೇಶಗಳ ಪಾರಾಯಣ ನಡೆಯಲಿದೆ. ದಿ.11-11-2020 ರಂದು ಬೆ.9-11 ರವರೆಗೆ ರಾಮರಾವ್ ಮಹಾರಾಜರ ಪೌರಾ ಅಸ್ಥಿ ಪೂಜೆ ಮತ್ತು ದರ್ಶನ ಕಾರ್ಯಕ್ರಮ, 11 ಗಂಟೆಗೆ ಗೋಮಾತಾ ಪೂಜೆ, 11.30 ಕ್ಕೆ ರಾಮರಾವ ಮಹಾರಾಜರ ಸ್ಮರಣಾರ್ಥ ಸಸಿ ನೆಡುವ ಕಾರ್ಯಕ್ರಮ, ಮತ್ತು 12 ಗಂಟೆಗೆ ರಾಮರಾವ್ ಮಹಾರಾಜ್ ಅವರ ಮಂದಿರದ ಭೂಮಿ ಪೂಜೆ ನಂತರ 12.30ಕ್ಕೆ ಶೃದ್ಧಾಂಜಲಿ ಸಭೆ ನಡೆಯಲಿದೆ ಎಂದು ಸಚಿವರು ತಿಳಿಸಿದ್ದಾರೆ. ಈ ಕಾರ್ಯಕ್ರಮಗಳು ಸಚಿವರಾದ ಪ್ರಭು ಚವ್ಹಾಣ ಅವರ ನಿವಾಸ ಘಮಸುಬಾಯಿ ತಾಂಡಾದಲ್ಲಿ ನಡೆಯಲಿದ್ದು, ಬೀದರ ಜಿಲ್ಲೆಯ ಮತ್ತು ಸುತ್ತಮುತ್ತಲ ಎಲ್ಲ ಸದ್ಭಕ್ತರು ಆಗಮಿಸಿ ಸದ್ಗುರುಗಳ ಕೃಪಾಶೀರ್ವಾದಕ್ಕೆ ಪಾತ್ರರಾಗಲು ಮತ್ತು ಅವರ ಸದಾಶಯವನ್ನು ಮುಂದುವರೆಸಲು ಕೋರಿದ್ದಾರೆ.

ದಿ.10 ಮತ್ತು 11 ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಕೊರೊನಾ ನಿಯಮಗಳನ್ನು ಭಕ್ತರು ಕಡ್ಡಾಯವಾಗಿ ಪಾಲಿಸಬೇಕು. ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದ್ದು, ಆಗಮಿಸುವ ಭಕ್ತರು ಮಾಸ್ಕ್ ಧರಿಸಿಯೇ ಆಗಮಿಸಬೇಕು. ಈ ವಿಷಯದಲ್ಲಿ ಯಾರೊಬ್ಬರೂ ಉದಾಸೀನ ಮಾಡಬಾರದೆಂದು ಸಚಿವರು ಮನವಿ ಮಾಡಿದ್ದಾರೆ.