ನ.10ರಂದು ಗರಡಿ ಚಿತ್ರ ತೆರೆಗೆ

ಕಲಬುರಗಿ:ನ.5: ಯೋಗರಾಜ್ ಭಟ್ ನಿರ್ದೇಶನದೊಂದಿಗೆ ಪರ್ವ ಪೆÇ್ರಡಕ್ಷನ್ ಹೌಸ್ ನಿರ್ಮಿಸಿರುವ ಗರಡಿ ಚಲನಚಿತ್ರ ಇದೇ ನವೆಂಬರ್ 10ರಂದು ಬಿಡುಗಡೆ ಮಾಡಲಾಗುತ್ತಿದೆ ಎಂದು ಮಾಜಿ ಸಚಿವ ಹಾಗೂ ಚಿತ್ರದ ನಿರ್ಮಾಪಕ, ನಟ ಬಿ.ಸಿ.ಪಾಟೀಲ್ ತಿಳಿಸಿದರು.

ಇಲ್ಲಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಢಿ ಉದ್ದೇಶಿಸಿ ಮಾತನಾಡಿದ ಅವರು, ಎಸ್.ಎಸ್.ಸೂರ್ಯ ನಾಟಕ ನಟರಾಗಿರುವ ಈ ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಹರಿಕೃಷ್ಣ ಸಂಗೀತ ನೀಡಿದ್ದಾರೆ ಎಂದರು.

ಈಗಾಗಲೇ ನ.1ರಂದು ರಾಣೆಬೆನ್ನೂರಿನಲ್ಲಿ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ಖ್ಯಾತ ನಟ ದರ್ಶನ್ ತೂಗುದೀಪ ಅವರು ಟ್ರೇಲರ್ ಬಿಡುಗಡೆ ಮಾಡಿದ್ದು, ಬಿಡುಗಡೆಯಾದ ಮೂರು ದಿನಗಳಲ್ಲಿ ಸುಮಾರು 11 ಲಕ್ಷ ಅಭಿಮಾನಿಗಳು ವೀಕ್ಷಿಸಿದ್ದಾರೆ. ಚಿತ್ರದಲ್ಲಿರುವ ಐದರ ಪೈಕಿ ಮೂರು ಹಾಡುಗಳನ್ನು ಅದಾಗಲೇ ಬಿಡುಗಡೆ ಮಾಡಲಾಗಿದ್ದು, ಯೋಗರಾಜ್ ಭಟ್ ಅವರು ರಚಿಸಿರುವ ಹೊಡಿಲೆ ಹಲಗಿ ಗೀತೆಯನ್ನು ಸುಮಾರು 35 ಲಕ್ಷ ಮಂದಿ ಆಲಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಉತ್ತರ ಕರ್ನಾಟಕದ ಕುಸ್ತಿ ಕಲೆಯ ಸುತ್ತ ಚಿತ್ರಕಥೆ ಹೆಣೆದಿದ್ದು, ಇಡೀ ರಾಜ್ಯದ ಬೇರೆ ಬೇರೆ ಭಾಗಗಳ ಪೈಲ್ವಾನರು ಚಿತ್ರದ ಪಾತ್ರ ವರ್ಗದಲ್ಲಿದ್ದಾರೆ ಎಂದು ಪಾಟೀಲ್ ಮಾಹಿತಿ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವಿಜಯಕುಮಾರ್ ಪಾಟೀಲ್ ತೇಗಲತಿಪ್ಪಿ, ಯಶವಂತ ಅಷ್ಟಗಿ ಹಾಗೂ ಗುರುಬಸಪ್ಪ ಸಜ್ಜನಶೆಟ್ಟಿ ಇದ್ದರು.


‘ಗರಡಿ’ ಎಲ್ಲರ ಬದುಕಿನ ತಿರುವು
ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಕಾರ್ಯಕ್ಷೇತ್ರದಲ್ಲಿ ಹೌದು ಎನಿಸಿಕೊಳ್ಳಬೇಕಾದರೆ ಗರಡಿಯಲ್ಲಿ ಪಳಗಬೇಕಾಗುತ್ತದೆ. ಕೇವಲ ಪೈಲ್ವಾನರು ಮಾತ್ರ ಗರಡಿಯಲ್ಲಿ ಪಳಗಬೇಕೆಂದೇನೂ ಇಲ್ಲ. ಪ್ರತಿಯೊಬ್ಬರೂ ತಮ್ಮ ತಮ್ಮ ಕಾರ್ಯಕ್ಷೇತ್ರದಲ್ಲಿ ಪಳಗುವ ಪ್ರಕ್ರಿಯೆಯನ್ನು ಗರಡಿ ಎಂದೇ ವ್ಯಾಖ್ಯಾನಿಸಲಾಗುತ್ತದೆ. ಇಂಥದ್ದೊಂದು ಕಥಾ ವಸ್ತು ಚಿತ್ರದಲ್ಲಿದೆ ಎಂದು ಗರಡಿ ನಿರ್ದೇಶಕ ಯೋಗರಾಜ್ ಭಟ್ ವಿವರಿಸಿದರು.

ಕುಸ್ತಿ ಎಂಬುದು ಉತ್ತರ ಕರ್ನಾಟಕದ ದೇಸಿ ಕಲೆಯ ಜೀವಾಳವಾಗಿದ್ದು, ಆ ದೃಷ್ಟಿಯಿಂದ ಬಾದಾಮಿಯಲ್ಲಿ ಚಿತ್ರದ ಶೇ.60ರಷ್ಟು ಚಿತ್ರೀಕರಣ ನಡೆಸಲಾಗಿದೆ ಎಂದರು.

ಚಿತ್ರದ ಕೊನೆಯ 20 ನಿಮಿಷ ಬಾಕಿ ಇರುವಾಗ ನಟ ದರ್ಶನ್ ನೀಡುವ ಎಂಟ್ರಿ ಹಾಗೂ ಆ ಸಂದರ್ಭದಲ್ಲಿ ಬರುವ ಅವರ ಡೈಲಾಗ್ ಗಳು ಚಿತ್ರದ ಪ್ರಮುಖ ಹೈಲೈಟ್ಸ್ ಎಂದು ಭಟ್ ಚಿತ್ರದ ಕುರಿತು ಕುತೂಹಲ ಕೆರಳಿಸಿದರು.