ನ.೭: ಉಡುಪಿ ಜಿಲ್ಲಾಜನಸಂಕಲ್ಪ ಸಮಾವೇಶ;  ಬಿಎಸ್‌ವೈ, ಬೊಮ್ಮಾಯಿ ಭಾಗಿ  


ಉಡುಪಿ, ನ.೪- ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜೊತೆಗೆ ನ.೭ರ ಸೋಮವಾರ ಉಡುಪಿ ಜಿಲ್ಲೆಯ ಪ್ರವಾಸ ಕೈಗೊಳ್ಳಲಿದ್ದು, ಈ ಸಂದರ್ಭದಲ್ಲಿ ಕಾಪು ಮತ್ತು ತ್ರಾಸಿಗಳಲ್ಲಿ ನಡೆಯುವ ಉಡುಪಿ ಜಿಲ್ಲಾ ಜನಸಂಕಲ್ಪ ಸಮಾವೇಶಗಳಲ್ಲಿ ಭಾಗವಹಿಸುವುದು ಮಾತ್ರವಲ್ಲದೇ ಬೈಂದೂರು ಕ್ಷೇತ್ರದಲ್ಲಿ ೧೩೦೦ ಕೋಟಿ ರೂ. ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸವನ್ನು ನೆರವೇರಿಸಲಿದ್ದಾರೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.
ಉಡುಪಿ ಕಡಿಯಾಳಿಯ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಪುವಿನಲ್ಲಿ ಸುಮಾರು ೨೦,೦೦೦ ಹಾಗೂ ಬೈಂದೂರು ಸಭೆಯಲ್ಲಿ ೨೫,೦೦೦ ಮಂದಿ ಫಲಾನುಭವಿಗಳು, ಕಾರ್ಯಕರ್ತರು ಸೇರುವ ನಿರೀಕ್ಷೆ ಇದೆ. ಸಭೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಇಬ್ಬರು ಸಚಿವರು, ಎಲ್ಲಾಜನಪ್ರತಿನಿಧಿಗಳು ಸಹ ಭಾಗವಹಿಸಲಿದ್ದಾರೆ. ಅಂದು ೧೧ ಗಂಟೆಗೆ ಕಾಪುಗೆ ಆಗಮಿಸುವ ಮುಖ್ಯಮಂತ್ರಿ ಕಾಪು ಬಸ್ ನಿಲ್ದಾಣದ ಬಳಿ ಹಾಗೂ ಸಂಜೆ ೪ ಕ್ಕೆ ತ್ರಾಸಿ ಮುಳ್ಳಿಕಟ್ಟೆ ರಾಷ್ಟ್ರೀಯ ಹೆದ್ದಾರಿ ಬಳಿ ನಡೆಯುವ ಜನಸ್ಪಂದನ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಪ್ರತೀ ಬೂತ್‌ಮಟ್ಟದಿಂದ ಒಂದು ಬಸ್ ಜನರ ಸಮಾವೇಶಕ್ಕೆ ಆಗಮಿಸಲಿದ್ದಾರೆ. ಈಗಾಗಲೇ ನಮ್ಮ ಕಾರ್ಯಕರ್ತರು ಮನೆಮನೆಗೆ ತೆರಳಿ ಕೇಂದ್ರ ಹಾಗೂ ರಾಜ್ಯ ಸರಕಾರದ ಯೋಜನೆಗಳ ಕುರಿತು ಮಾಹಿತಿಯನ್ನು ತಲುಪಿಸಿದ್ದಾರೆ. ವಿವಿಧ ಯೋಜನೆಗಳ ಫಲಾನುಭವಿಗಳು ಜನಸಂಕಲ್ಪ ಸಭೆಯಲ್ಲಿ ಪಾಲ್ಗೊಳ್ಳುವರು. ಹೀಗಾಗಿ ಈ ಸಮಾವೇಶಗಳು ಸಂಪೂರ್ಣ ಯಶಸ್ಸುಗಳಿಸುವ ಬಗ್ಗೆ ನಮಗೆ ವಿಶ್ವಾಸವಿದೆ ಎಂದವರು ವಿವರಿಸಿದರು. ಕಾಪು ಸಭೆಯಲ್ಲಿ ಭಾಗವಹಿಸಿದ ಬಳಿಕ ಮುಖ್ಯಮಂತ್ರಿ ಉಡುಪಿ ಎಂಜಿಎಂ ಕಾಲೇಜಿನಲ್ಲಿ ನಡೆಯುವ ಕಾರ್ಯಕ್ರಮವೊಂದರ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳುವರು. ಸಂಜೆ ಕೊಲ್ಲೂರಿನಲ್ಲಿ ವಾಸ್ತವ್ಯ ಮಾಡುವ ಅವರು ಮರುದಿನ ಬೆಳಗ್ಗೆ ಹಾವೇರಿಗೆ ತೆರಳಲಿದ್ದಾರೆ. ಜನಸಂಕಲ್ಪ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಬಿಜೆಪಿ ಜಿಲ್ಲಾ ವಿಶೇಷ ಕಾರ್ಯಕಾರಿಣಿ ಸಭೆಯು ನ.೫ರಂದು ಬೆಳಗ್ಗೆ ೧೧ಕ್ಕೆ ಮಣಿಪಾಲದ ಹೋಟೆಲ್ ಕಂಟ್ರಿ ಇನ್ ಸಭಾಂಗಣದಲ್ಲಿ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಇದನ್ನು ಉದ್ಘಾಟಿಸುವರು. ಸಚಿವರಾದ ಸುನಿಲ್ ಕುಮಾರ್ ಹಾಗೂ ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಎಲ್ಲಾ ಶಾಸಕರು, ಪದಾಧಿಕಾರಿಗಳು ಭಾಗವಹಿಸುವರು ಎಂದರು. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಉಪಾಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ, ಜಿಲ್ಲಾ ವಕ್ತಾರ ಕೆ.ರಾಘವೇಂದ್ರ ಕಿಣಿ, ಸಹವಕ್ತಾರ ಎ.ಶಿವಕುಮಾರ್, ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ, ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಶೆಟ್ಟಿ, ಗುರುಪ್ರಸಾದ್, ದಾವೂದ್ ಅಬೂಬಕ್ಕರ್ ಉಪಸ್ಥಿತರಿದ್ದರು.