ನ.೨೭ : ಬಿಜೆಪಿ ಗ್ರಾಮ ಸ್ವರಾಜ್ ಯಾತ್ರೆ

ಬೆಂಗಳೂರು, ನ. ೨೨- ರಾಜ್ಯದಲ್ಲಿ ಬಿಜೆಪಿ ಸಂಘಟನೆಗೆ ಹೆಚ್ಚು ಒತ್ತು ನೀಡುತ್ತಿರುವ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಗ್ರಾ. ಪಂ. ಚುನಾವಣೆಗಳಲ್ಲಿ ಮೇಲುಗೈ ಸಾಧಿಸುವ ಉದ್ದೇಶದಿಂದ ಎಲ್ಲಾ ಜಿಲ್ಲೆಗಳಲ್ಲಿ ಗ್ರಾಮ ಸ್ವರಾಜ್ ಯಾತ್ರೆ ಕೈಗೊಳ್ಳಲು ಮುಂದಾಗಿದ್ದಾರೆ.
ನವೆಂಬರ್ ೨೭ ರಿಂದ ಡಿಸೆಂಬರ್ ೨ರವರೆಗೂ ಗ್ರಾಮ ಸ್ವರಾಜ್ ಯಾತ್ರೆ ನಡೆಯಲಿದೆ. ೩ ಅಥವಾ ೪ ವಿಧಾನಸಭೆ ಕ್ಷೇತ್ರಗಳನ್ನು ಒಗ್ಗೂಡಿಸಿ ಪ್ರತಿ ಜಿಲ್ಲೆಯ ಎರಡು ಪ್ರದೇಶಗಳಲ್ಲಿ ಯಾತ್ರೆ ಆರಂಭಿಸಲು ಬಿಜೆಪಿ ನಿರ್ಧರಿಸಿದೆ.
ಗ್ರಾ.ಪಂ. ಚುನಾವಣೆ ದೃಷ್ಟಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಇದರೊಂದಿಗೆ ಕುಟುಂಬ ಮಿಲನ ಕಾರ್ಯಕ್ರಮವನ್ನು ಶೇ. ೬೦ ರಷ್ಟು ಪೂರ್ಣಗೊಳಿಸಲಾಗಿದೆ.
ಪಂಚರತ್ನ ಪ್ರಕ್ರಿಯೆ ಶೇ. ೭೦ ಪೂರ್ಣಗೊಂಡಿದ್ದು, ತಿಂಗಳಾಂತ್ಯಕ್ಕೆ ಶೇ. ೧೦೦ರ ಗುರಿತಲುಪುವ ಉದ್ದೇಶ ಹೊಂದಲಾಗಿದೆ.
ಗ್ರಾಮ ಸ್ವರಾಜ್ ಯಾತ್ರೆಗಾಗಿ ೬ ತಂಡಗಳ ರಚನೆಗೆ ಪಕ್ಷ ಕ್ರಮ ಕೈಗೊಂಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮುಖಂಡರಾದ ಲಕ್ಷ್ಮಣ ಸವದಿ, ಗೋವಿಂದ ಕಾರಜೋಳ, ಕೆ.ಎಸ್. ಈಶ್ವರಪ್ಪ, ಆರ್. ಅಶೋಕ್ ಮತ್ತು ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ರಚನೆಯಾಗಲಿರುವ ತಂಡಗಳು ರಾಜ್ಯದ ೩೦ ಜಿಲ್ಲೆಗಳಲ್ಲಿ ಗ್ರಾಮ ಸ್ವರಾಜ್ ಯಾತ್ರೆ ಮೂಲಕ ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ.
ಯಾತ್ರೆ ವೇಳೆ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಜಾರಿಗೆ ತಂದಿರುವ ಯೋಜನೆಗಳ ಮಾಹಿತಿ, ಕೊರೊನಾ ಸಮಯದಲ್ಲಿ ಕೇಂದ್ರ ಸರ್ಕಾರ ಕೈಗೊಂಡಿರುವ ಯೋಜನೆಗಳು ಹಾಗೂ ಇನ್ನಿತರ ಜನಪರ ಯೋಜನೆಗಳ ಮಾಹಿತಿಯನ್ನು ಜನರಿಗೆ ತಲುಪಿಸುವ ಮೂಲಕ ಪಕ್ಷದ ಸಂಘಟನೆಗೆ ನಿರ್ಧರಿಸಲಾಗಿದೆ.