ನ.೨೬ರಂದು ಅಖಿಲ ಭಾರತ ಮುಷ್ಕರ ಹಬ್ಬದಂತೆ ಹೋರಾಟವನ್ನು ಆಚರಿಸಿ=ವಿಜಯಭಾಸ್ಕರ್

ರಾಯಚೂರು,ನ.೮- ಕೇಂದ್ರ ಸರ್ಕಾರದ ರೈತ, ಕಾರ್ಮಿಕ, ಜನವಿರೋಧಿ ನೀತಿಗಳ ವಿರುದ್ಧ ಬಡಜನರು ಹಬ್ಬದ ರೀತಿಯಲ್ಲಿ ಹೋರಾಟವನ್ನು ಮಾಡಬೇಕಿದೆ ಎಂದು ಎಐಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಜಯಭಾಸ್ಕರ್ ಹೇಳಿದರು.
ಅವರಿಂದು ನಗರದ ಅಂಬೇಡ್ಕರ್ ವೃತ್ತದಲ್ಲಿರುವ ಸರ್ಕಾರಿ ನೌಕರರ ಭವನದಲ್ಲಿ ಹಮ್ಮಿಕೊಂಡಿದ್ದ ಕೇಂದ್ರ ಸರ್ಕಾರದ ರೈತ, ಕಾರ್ಮಿಕ, ಜನ ವಿರೋಧಿ ನೀತಿಗಳ ವಿರುದ್ಧ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ಜಿಲ್ಲಾಮಟ್ಟದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.
ಎಲ್ಲ ಸಂಘಟನೆಗಳ ಐಕ್ಯತೆಯಿಂದ ಕೇಂದ್ರ ಸರ್ಕಾರದ ರೈತ, ಕಾರ್ಮಿಕ, ಜನವಿರೋಧಿ ನೀತಿಗಳ ವಿರುದ್ಧ ರಾಜ್ಯಾದ್ಯಂತ ಹೋರಾಟಗಳನ್ನು ರೂಪಿಸಲಾಗುವುದು. ಬಡಜನರು ಹೋರಾಟಗಳನ್ನು ಹಬ್ಬದಂತೆ ಆಚರಿಸಬೇಕು. ನವೆಂಬರ್ ೨೬ರಂದು ಅಖಿಲ ಭಾರತ ಮುಷ್ಕರವನ್ನು ಹಮ್ಮಿಕೊಂಡಿದ್ದು ಅದನ್ನು ಯಶಸ್ವಿಗೋಳಿಸಬೇಕು ಎಂದು ಹೇಳಿದರು.
ಕೇವಲ ಐದು ಕೋಟಿ ರೂ.ಗಳ ಬಂಡವಾಳದಿಂದ ಪ್ರಾರಂಭವಾದ ಭಾರತೀಯ ಜೀವ ವಿಮಾ ನಿಗಮವನ್ನು ಕೇಂದ್ರ ಸರ್ಕಾರ ಖಾಸಗೀಕರಣ ಮಾಡಲು ಹೊರಟಿದ್ದು, ಇದನ್ನು ಕೈಬಿಡಬೇಕು. ಅದೇ ರೀತಿ ಹಲವು ರೈತ, ಕಾರ್ಮಿಕ, ವಿರೋಧಿ ನೀತಿಗಳನ್ನು ಕೂಡಲೇ ಹಿಂಪಡೆಯಬೇಕು ಎಂದರು.
ಈ ಸಂದರ್ಭದಲ್ಲಿ ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಶೇಕ್ಷಾಖಾದ್ರಿ, ವಿಮಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ರವಿ, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಎಸ್. ಶರಣಬಸವ, ಎನ್.ಎಸ್. ವೀರೇಶ್, ಸಲಾವುದ್ದೀನ್, ಬಸವರಾಜ್ ಗಾರಲದಿನ್ನಿ, ಭಾಷುಮಿಯ, ವರಲಕ್ಷ್ಮಿ, ಪದ್ಮ, ಈರಮ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.