ನ.೨೩: ವೆನ್ಜ್ ಅಬ್ದುಲ್ಲ ಕೊಲೆಯತ್ನ ಖಂಡಿಸಿ ಠಾಣೆ ಎದುರು ಪ್ರತಿಭಟನೆ

ಮಂಗಳೂರು, ನ.೨೧- ಗುರುಪುರ ಕೈಕಂಬ ಪರಿಸರದಲ್ಲಿ ಇತ್ತೀಚೆಗೆ ನಡೆದಿದ್ದ ವೆನ್ಜ್ ಅಬ್ದುಲ್ಲ ಕೊಲೆ ಯತ್ನ ಪ್ರರಕಣದ ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಎಂದು ಆಗ್ರಹಿಸಿ ನ.೨೩ರಂದು ಬಜ್ಪೆ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಗುರುಪುರ ಕೈಕಂಬ ಮುಸ್ಲಿಂ ಒಕ್ಕೂಟ ತಿಳಿಸಿದೆ.

ಕರ್ನಾಟಕ ಮುಸ್ಲಿಂ ಜಮಾತ್‌ನ ಕೋ- ಆರ್ಡಿನೇಟರ್ ಅಶ್ರಫ್ ಕಿನಾರ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವೆನ್ಜ್ ಅಬ್ದುಲ್ಲ ಗುರುಪುರ ಕೈಕಂಬ ಪರಿಸರದಲ್ಲಿ ಸಾಮಾಜಿಕ ಶೈಕ್ಷಣಿಕ ಬಡವರ ಕಲ್ಯಾಣ ಕಾರ್ಯಗಳಿಗಾಗಿ ನಿರಂತರವಾಗಿ ದುಡಿಯುತ್ತಿದ್ದರು. ವಿವಿಧ ಮುಸ್ಲಿಂ ಸಂಘಟನೆಗಳಲ್ಲಿ ಗುರುತಿಸಿಕೊಂಡಿರುವ ಅವರಿಗೆ ನ.೧೫ರಂದು ರಾತ್ರಿ ಮಾರಾಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಲಾಗಿತ್ತು. ಆದರೆ ನೈಜ ಆರೋಪಿಗಳನ್ನು ಪೊಲೀಸರು ಇದುವರೆಗೆ ಬಂಧಿಸುವ ಕೆಲಸ ಮಾಡಲೇ ಇಲ್ಲ ಎಂದು ಅವರು ಆರೋಪಿಸಿದರು. ಕಳೆದ ಎರಡು ವರ್ಷಗಳಿಂದ ಕೈಕಂಬ ಪರಿಸರದಲ್ಲಿ ಕೆಲವು ಸಂಸ್ಥೆಗಳಲ್ಲಿ ನಡೆಯುತ್ತಿದ್ದ ಅವ್ಯವಹಾರವನ್ನು ಬಯಲಿಗೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕಾರಣಕ್ಕಾಗಿ ಅಬ್ದುಲ್ಲ ಆವರ ಹತ್ಯೆಗೆ ಈ ಮುಂಚೆಯೂ ಪ್ರಯತ್ನ ನಡೆದಿತ್ತು. ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಗೆ ದೂರನ್ನು ನೀಡಲಾಗಿತ್ತು. ಆದರೆ ಆ ಬಗ್ಗೆಯೂ ಕ್ರಮ ಆಗಿಲ್ಲ. ಕಳೆದ ಒಂದು ವರ್ಷದ ಹಿಂದೆ ಮಸೀದಿಯೊಂದರಲ್ಲಿ ನಡೆದ ವಾದ ವಿವಾದಕ್ಕೆ ಸಂಬಂಧಿಸಿ ದಂತೆ ಕೆಲವರ ಮೇಲೆ ಪ್ರಕರಣ ದಾಖಲಾಗಿತ್ತು. ಆ ಸಂದರ್ಭದಲ್ಲಿ ಅಬ್ದುಲ್ಲ ಅವರು ಬೆಂಗಳೂರಿನಲ್ಲಿದ್ದರು. ಪ್ರಕರಣ ನಡೆದು ಒಂದು ವರ್ಷ ಕಳೆದ ನಂತರ ಕಳೆದ ತಿಂಗಳಲ್ಲಿ ಅಬ್ದುಲ್ಲ ಅವರ ಹೆಸರನ್ನು ಪ್ರಕರಣದಲ್ಲಿ ಸೇರಿಸಲಾಗಿದೆ. ಇದರಿಂದಾಗಿ ಅಬ್ದುಲ್ಲ ಅವರ ವಿರುದ್ಧ ವ್ಯವಸ್ಥಿತವಾಗಿ ಸಂಚು ರೂಪಿಸುತ್ತಿರುವುದು ಇದರಿಂದ ಸಾಬೀತಾಗಿದೆ ಎಂದು ಅವರು ತಿಳಿಸಿದರು. ಸಮಾಜ ಘಾತುಕ ಶಕ್ತಿಗಳ ಹುಟ್ಟಡಗಿಸುವುದು ಪೊಲೀಸ್ ಇಲಾಖೆಯ ಕರ್ತವ್ಯ. ಈ ನಿಟ್ಟಿನಲ್ಲಿ ಅಬ್ದುಲ್ಲ ಅವರ ಹತ್ಯೆ ಯತ್ನದ ನೈಜ ಆರೋಪಿ ಗಳನ್ನು ಕೂಡಲೇ ಬಂಧಿಸಿ ಸೂಕ್ತ ನ್ಯಾಯ ಒದಗಿಸಬೇಕು ಎಂದು ಅವರು ಆಗ್ರಹಿಸಿದರು. ವೆನ್ಜ್ ಅಬ್ದುಲ್ಲ ಅವರ ಸಹೋದರರಾದ ಬದ್ರುದ್ದೀನ್, ನಿಯಾಝ್, ಸಂಬಂಧಿ ಮುಕ್ದೋಮ್, ರಿಯಾಝ್ ಬಿಕರ್ನಕಟ್ಟೆ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.