ನ.೨೩ ಕ್ಕೆ ಸಿಎಂ ಹರಿಹರ ಭೇಟಿ; ಡಿಎಸ್ ಎಸ್ ನಿಂದ ಕಪ್ಪುಬಟ್ಟೆ ಪ್ರದರ್ಶನ

ದಾವಣಗೆರೆ.ನ.೨೧: ನ್ಯಾಯಮೂರ್ತಿ ಎ.ಜೆ.‌ ಸದಾಶಿವ ಆಯೋಗದ ವರದಿ ಯಥಾವತ್ ಜಾರಿ ಒಳಗೊಂಡಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನ.‌ 23 ರಂದು ಹರಿಹರಕ್ಕೆ ಆಗಮಿಸುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಕಪ್ಪು ಬಟ್ಟೆ ಪ್ರದರ್ಶನ ನಡೆಸಲಾಗುವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ(ಪ್ರೊ. ಬಿ. ಕೃಷ್ಣಪ್ಪ) ಹರಿಹರ ತಾಲೂಕು ಸಂಚಾಲಕ ಪಿ.ಜೆ. ಮಹಾಂತೇಶ್ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ಅವರು, ಹರಿಹರದಲ್ಲಿ ನ.೨೩ ಕ್ಕೆ ನಡೆಯುವ ಜನಸಂಕಲ್ಪ ಸಮಾವೇಶ ದಲ್ಲಿ ಭಾಗವಹಿಸಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕಪ್ಪು ಬಟ್ಟೆ ಪ್ರದರ್ಶನ ನಡೆಸಲಾಗುವುದು ಎಂದು ತಿಳಿಸಿದರು.ಮಾದಿಗ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಒಳ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿ ಕಳೆದ 25 ವರ್ಷದಿಂದ ನಿರಂತರವಾಗಿ ಹೋರಾಟ ನಡೆಸಲಾಗುತ್ತಿದೆ. ಆದರೆ, ಯಾವುದೇ ಸರ್ಕಾರ ಬೇಡಿಕೆ ಈಡೇರಿಸಿಲ್ಲ.‌ ಬದಲಿಗೆ ಹೋರಾಟಗಾರರ ವಿರುದ್ದವೇ ದೂರು ದಾಖಲಿಸಿ ಹೋರಾಟ ಹತ್ತಿಕ್ಕುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ತಿಳಿಸಿದರು.ಮಾದಿಗ ಸಮುದಾಯದ ಮೀಸಲಾತಿ ಕಬಳಿಸುವ ಹುನ್ನಾರ ನಡೆಸಲಾಗುತ್ತಿದೆ. ಮಾಯಕೊಂಡ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದರೂ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರೊಬ್ಬರು ಬೇಡ ಜಂಗಮ ಎಂಬುದಾಗಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದು ಚುನಾವಣೆಯಲ್ಲಿ ಸ್ಪರ್ಧಿಸಲು ಪ್ರಯತ್ನ ನಡೆಸುತ್ತಿದ್ದಾರೆ. ಅವರು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುವ ಯತ್ನ ನಡೆಸುವುದು ಗೊತ್ತಿದ್ದರೂ ಕೆಲವು ಜಿಲ್ಲಾ ಮಟ್ಟದ ಅಧಿಕಾರಿಗಳು ಕಾರ್ಯಕ್ರಮ ಗಳಲ್ಲಿ ಭಾಗವಹಿಸುತ್ತಾರೆ ಎಂದು ದೂರಿದರು.ಹರಿಹರ ತಾಲೂಕಿನ ವಿವಿಧೆಡೆ ಬಹಳ ಕೆಟ್ಟ ರಾಜಕೀಯ ನಡೆಸಲಾಗುತ್ತಿದೆ.‌ ದಲಿತರು ಕೆಲಸ ಮಾಡುವ ಕಡೆ ಅವರನ್ನು ಯಾಕೆ ಕೆಲಸಕ್ಕೆ ತೆಗೆದುಕೊಂಡಿದ್ದೀರಿ ಎಂದೆಲ್ಲಾ ಕೇಳಲಾಗುತ್ತಿದೆ. ಇಂತಹ ಹಲವಾರು ವಿಷಯಗಳ ಮುಂದಿಟ್ಟುಕೊಂಡು ಮುಖ್ಯಮಂತ್ರಿ ಗಳ ಎದುರು ಕಪ್ಪು ಬಟ್ಟೆ ಪ್ರದರ್ಶನ ನಡೆಸಲಾಗುವುದು ಎಂದು ತಿಳಿಸಿದರು. ಸಂಘಟನೆ ಜಿಲ್ಲಾ ಸಂಚಾಲಕ ಕುಂದುವಾಡ ಮಂಜುನಾಥ್, ಕೆಟಿಜೆ ನಗರ ಪ್ರದೀಪ್, ಅಣಜಿ ಹನುಮಂತಪ್ಪ ಇದ್ದರು.