ನ.೨೩: ಎನ್‌ಪಿಎಸ್‌ ರದ್ದತಿಗೆ ಆಗ್ರಹಿಸಿ ಪಾದಯಾತ್ರೆ 

ಉಡುಪಿ, ನ.1೯- ಕರ್ನಾಟಕ ರಾಜ್ಯ ಸರಕಾರಿ ಎನ್‌ಪಿಎಸ್ ನೌಕರರ ಸಂಘದ ಉಡುಪಿ ಜಿಲ್ಲಾ ಘಟಕದ ನೇತೃತ್ವದಲ್ಲಿ ಸರಕಾರಿ ನೌಕರರಿಗೆ ಮರಣ ಶಾಸನವಾಗಿರುವ ನೂತನ ಪಿಂಚಣಿ ಯೋಜನೆ(ಎನ್‌ಪಿಎಸ್) ರದ್ದುಗೊಳಿಸು ವಂತೆ ಒತ್ತಾಯಿಸಿ ನ.23ರಂದು ಬೆಳಗ್ಗೆ 9.30ಕ್ಕೆ ಇಂದ್ರಾಳಿಯಿಂದ ಉಡುಪಿ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ರಾಘವ ಶೆಟ್ಟಿ ತಿಳಿಸಿದ್ದಾರೆ. 

ಉಡುಪಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಳಿಕ ಜಿಲ್ಲಾಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಸರಕಾರಕ್ಕೆ ಮನವಿ ಸಲ್ಲಿಸ ಲಾಗುವುದು. ಈ ಪಾದಯಾತ್ರೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ಶಾಂತರಾಮ್ ಭಾಗವಹಿಸಲಿರುವರು. ಇದರಲ್ಲಿ ಸರಕಾರಿ ನೌಕಕರು ಹಾಗೂ ಅವರ ಕುಟುಂಬದವರು ಸೇರಿದಂತೆ ಸುಮಾರು 2500 ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು. ರಾಜ್ಯದ ಎಲ್ಲ ಜಿಲ್ಲೆಯಲ್ಲೂ ಹೋರಾಟಗಳು ನಡೆಯಲಿದ್ದು, ಇದಕ್ಕೆ ಸರಕಾರ ಸ್ಪಂದಿಸದಿದ್ದರೆ ಡಿ.19ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಮಾಡು ಇಲ್ಲವೇ ಮಡಿ ಅನಿರ್ದಿಷ್ಟಾವಧಿ ಹೋರಾಟ ನಡೆಸಲು ನಿರ್ಧರಿಸಲಾಗಿದೆ. ಈ ಹೋರಾಟದಲ್ಲಿ ಉಡುಪಿ ಜಿಲ್ಲೆಯ 6000 ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿದರು. ಉದ್ಯೋಗಿಯ ವೇತನದಲ್ಲಿ ಶೇ.10ರಷ್ಟು ಮೊತ್ತ ಕಡಿತಗೊಳಿಸಿ ಇದಕ್ಕೆ ಸರಕಾರ ದಿಂದ ಶೇ.14ರಷ್ಟು ಮೊತ್ತ ಸೇರಿಸಿ ಮಾರುಕಟ್ಟೆಯಲ್ಲಿ ಬಂಡವಾಳ ಹೂಡುವ ಮೂಲಕ ಗಳಿಸುವ ಆದಾಯದಲ್ಲಿ ಮಾಸಿಕ ಪಿಂಚಣಿ ನೀಡುವ ಯೋಜನೆ ಯಾಗಿದೆ. ನಿವೃತ್ತಿ ದಿನಗಳಲ್ಲಿ ಮಾರುಕಟ್ಟೆಯ ಏರಿಳಿತದ ಮೇಲೆ ನಿರ್ಧಾರಿತ ವಾಗುವ ಪಿಂಚಣಿಯಿಂದ ಪ್ರತಿ ತಿಂಗಳು ನಿಶ್ಚಿತ ಮೊತ್ತ ಸಿಗದೇ ಆರ್ಥಿಕ ಸಮಸ್ಯೆಗೆ ಸಿಲುಕಬೇಕಾಗುತ್ತದೆ. ಕೋವಿಡ್ ಹಾವಳಿಯಿಂದ ಷೇರುಮಾರುಕಟ್ಟೆ ಹೊಡೆತಕ್ಕೆ ಸಿಲುಕಿ ಪ್ರತಿಯೊಬ್ಬರ ಎನ್‌ಪಿಎಸ್ ಖಾತೆಯಲ್ಲಿ 50 ರಿಂದ 80 ಸಾವಿರ ರೂ.ವರೆಗೆ ಕಳೆದುಕೊಂಡಿದ್ದಾರೆ ಎಂದು ಅವರು ಆರೋಪಿಸಿದರು. ಈಗಾಗಲೇ ರಾಜಸ್ತಾನ, ಜಾರ್ಖಂಡ್, ಛತ್ತೀಸ್‌ಘಡ್, ಪಂಜಾಬ್ ಸಹಿತ 5 ರಾಜ್ಯಗಳಲ್ಲಿ ಈ ಎನ್‌ಪಿಎಸ್ ಕಾಯಿದೆಯನ್ನು ರದ್ದುಗೊಳಿಸಿದೆ. ಪಶ್ಚಿಮ ಬಂಗಾಳ ಇನ್ನೂ ಕೂಡ ಜಾರಿ ಮಾಡಿಲ್ಲ. ಹಳೆಯ ಪಿಂಚಣಿ ವ್ಯವಸ್ಥೆಯಿಂದ ಸರಕಾರಕ್ಕೆ ಯಾವುದೇ ರೀತಿಯಲ್ಲೂ ಆರ್ಥಿಕ ಹೊಡೆತವಿಲ್ಲ ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾ ಕಾರ್ಯದರ್ಶಿ ರಾಮಚಂದ್ರ ವಾಕುಡ ಕೆ., ಕುಂದಾಪುರ ತಾಲೂಕು ಅಧ್ಯಕ್ಷ ಹರೀಶ್ ಕುಮಾರ್ ಶೆಟ್ಟಿ, ಕಾರ್ಕಳ ತಾಲೂಕು ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.