ನ.೨೧: ಎಸ್.ಟಿ ಮೀಸಲಾತಿ ಘೋಷಣೆಗೆ ಆಗ್ರಹಿಸಿ ಬೆಂಗಳೂರಿನಲ್ಲಿ ಧರಣಿ – ಡಾ.ನಾಗವೇಣಿ

ರಾಯಚೂರು -೧೯ ಕುರುಬ ಸಮಾಜವನ್ನು ಎಸ್.ಟಿಗೆ ಸೇರಿಸಲು ಆಗ್ರಹಿಸಿ ನವೆಂಬರ್ ೨೧ ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹಾಲುಮತ ಮಹಾಸಭಾದ ಮಹಿಳಾ ಘಟಕದ ರಾಜ್ಯ ಪುಧಾನ ಕಾರ್ಯದರ್ಶಿ ಡಾ. ನಾಗವೇಣಿ.ಎಸ್.ಪಾಟೀಲ್ ತುರ್ವಿಹಾಳ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಸಮಾಜದ ಹಿರಿಯ ಮುಖಂಡರ ನೇತ್ರತ್ವದಲ್ಲಿ ನಡೆಯಲಿರುವ ಧರಣಿಗೆ ರಾಯಚೂರು ಜಿಲ್ಲೆಯಿಂದ ಸುಮಾರು ೫೦೦ ಕ್ಕೂ ಹೆಚ್ಚು ಜನ ಭಾಗವಹಿಸುತ್ತಿದ್ದಾರೆ. ಮೂಲತ ಬುಡಕಟ್ಟು ಜನಾಂಗವಾಗಿರುವ ಕುರುಬರು ಬ್ರಿಟಿಷರ ಆಳ್ವಿಕೆಯಲ್ಲೂ,ತದ ನತಂರದ ೧೯೫೦ ರ ಭಾರತ ಸರ್ಕಾರದ ಗೆಜೆಟ್ನಲ್ಲಿ ೬ ಜಾತಿಗಳಲ್ಲಿ ೨ ಜಾತಿಗಳು, ೧೯೭೭ ರ ಕರ್ನಾಟಕ ರಾಜ್ಯದ ಎಸ್.ಟಿ ಪಟ್ಟಿಯಲ್ಲಿ ೬ ಜಾತಿಗಳು,ಕ್ರಮ ಸಂಖ್ಯೆ ೨೮ ರಲ್ಲಿ ಕುರುಬ ಇದೆ.ಆದರೂ ಸಹ ರಾಜ್ಯದ ಎಲ್ಲಾ ಕುರುಬರುಗೂ ಎಸ್.ಟಿ ಮೀಸಲಾತಿ ವಿಸ್ತಾರವಾಗದೇ ಅನ್ಯಾಯವಾಗಿದೆ. ವಾಲ್ಮೀಕಿ ಸಮುದಾಯವು ಸಮನಾರ್ಥ ಪದದಡಿಯಲ್ಲಿ ೧೯೯೧ ರಲ್ಲಿ ಕರ್ನಾಟಕ ರಾಜ್ಯದಲ್ಲಿ ಎಸ್.ಟಿ ಮೀಸಲಾತಿ ಪಟ್ಟಿಯೊಳಗೆ ಸೇರ್ಪಡೆಯಾಗುವ ಸಮಯದಲ್ಲಿ,ಕುರುಬ ಜಾತಿಯ ಸಮನಾರ್ಥ ಜಾತಿಗಳು ಕರ್ನಾಟಕ ರಾಜ್ಯದಲ್ಲಿಯೇ ಇದ್ದರೂ ಸಹ ಸರ್ಕಾರಗಳು ಎಸ್.ಟಿ ಮೀಸಲಾತಿ ಸೇರ್ಪಡೆ ಮಾಡದೇ ಘೋರ ಅನ್ಯಾಯ ಮಾಡಿವೆ ಎಂದರು.
೩೦ ವರ್ಷಗಳಿಂದ ಮೀಸಲಾತಿಯಿಂದ ವಂಚಿತವಾಗಿರುವ,ಏಕದೇವತಾರಾಧನೆ, ವಿಶಿಷ್ಟ ಸಂಸ್ಕೃತಿ,ಕುಲಪತಿ,ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುವ ಕುರುಬ ಜಾತಿಯನ್ನು ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವಿಸ್ತಾರ ಮಾಡುವಂತೆ ಸರ್ಕಾರಗಳಿಗೆ ಮನವಿ ,ಒತ್ತಾಯಗಳ ನಂತರ ೨೦೧೮ ರಲ್ಲಿ ಸಮ್ಮಿಶ್ರ ಸರ್ಕಾರ ಎಲ್ಲಾ ಜಿಲ್ಲೆಗಳಲ್ಲಿ ಕುಲಶಾಸ್ತ್ರೀಯ ಅಧ್ಯಯನ ನಡೆಸಲು ಕರ್ನಾಳ ರಾಜ್ಯ ಬುಡಕಟ್ಟು ಸಂಶೋಧನಾ ಇಲಾಖೆ, ಮೈಸೂರು ಇವರಿಗೆ ಆದೇಶ ನೀಡಿರುತ್ತದೆ. ಸುಪ್ರೀಂಕೋರ್ಟ್ ಆದೇಶದಂತೆ ಮೀಸಲಾತಿ ಪ್ರಮಾಣ ಶೇ ೫೦ ಮೀರದಂತೆ,ಯಾವುದೇ ಕಾನೂನು ತೊಡಕಿಲ್ಲದಂತ ಹಿಂದುಳಿದ ವರ್ಗಗಳ ೨ ಎ ಮೀಸಲಾತಿಯಲ್ಲಿನ ಶೇಕಡಾ ೮ ರಷ್ಟನ್ನು ಎಸ್.ಟಿ ಮೀಸಲಾತಿ ಪಟ್ಟಿಯೊಳಗೆ ಸೇರಿಸಿ,ಸಂವಿಧಾನ ಬದ್ಧವಾಗಿ ನಡೆದಿರುವ ಕುಲಶಾಸ್ತ್ರೀಯ ಅಧ್ಯಯನದ ವರದಿಯನ್ನು ವಿಳಂಬ ಮಾಡದೇ ಅಂಗೀಕರಿಸಿ,ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿ,ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ನಿರ್ಮಲ,ಲಕ್ಷ್ಮೀದೇವಿ,ಚಂದ್ರಾವತಿ ಇದ್ದರು.