ನ.೧೯ ಸಿರವಾರ : ರಾಜ್ಯ ಬಿಜೆಪಿ ಅಧ್ಯಕ್ಷರ ನೇತೃತ್ವ – ಜನ ಸ್ವರಾಜ್ ಯಾತ್ರೆ

ರಾಯಚೂರು.ನ.೧೮- ವಿಧಾನ ಪರಿಷತ್ ಚುನಾವಣಾ ಹಿನ್ನೆಲೆಯಲ್ಲಿ ನಾಳೆ ಸಿರವಾರ ಪಟ್ಟಣದಲ್ಲಿ ಜನ ಸ್ವರಾಜ್ ಯಾತ್ರೆ ಕಾರ್ಯಕ್ರಮ ನಡೆಸಲಿದೆಂದು ಬಿಜೆಪಿ ವಕ್ತಾರ ಗಿರೀಶ್ ಕನಕವೀಡು ಅವರು ಹೇಳಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ರಾಜ್ಯಾದ್ಯಂತ ನಾಲ್ಕು ತಂಡಗಳು ಪ್ರವಾಸದಲ್ಲಿದ್ದು, ರಾಯಚೂರು ಭಾಗಕ್ಕೆ ಬಿಜೆಪಿ ರಾಜ್ಯ ಅಧ್ಯಕ್ಷರು ಹಾಗೂ ಸಂಸದರಾದ ನಳೀನ್ ಕುಮಾರ ನೇತೃತ್ವದ ತಂಡ ಆಗಮಿಸುತ್ತಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವರಾದ ಕೆ.ಎಸ್.ಈಶ್ವರಪ್ಪ, ಮಾಜಿ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ್ ಅವರ ತಂಡಗಳು ರಾಜ್ಯದ ವಿವಿಧ ಭಾಗಗಳಲ್ಲಿ ಜನ ಸ್ವರಾಜ್ ಯಾತ್ರೆ ನಡೆಸಲಿದೆ. ಇಂದು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಕೊಪ್ಪಳದಲ್ಲಿ ಜನ ಸ್ವರಾಜ್ ಯಾತ್ರೆ ಉದ್ಘಾಟನೆಗೊಳ್ಳಲಿದೆ.
ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ಮತ್ತು ಕೇಂದ್ರ, ರಾಜ್ಯ ಸರ್ಕಾರಗಳ ಜನಪರ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡುವ ಉದ್ದೇಶದಿಂದ ಕಾರ್ಯಕ್ರಮ ನಿರ್ವಹಿಸಲಾಗುತ್ತದೆ. ನಾಳಿನ ಕಾರ್ಯಕ್ರಮದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ, ಮುರುಗೇಶ ನಿರಾಣಿ, ರಾಜುಗೌಡ, ಪ್ರತಾಪಸಿಂಹ, ಸಂಸದರಾದ ರಾಜಾ ಅಮರೇಶ್ವರ ನಾಯಕ, ಶಾಸಕರಾದ ಕೆ.ಶಿವನಗೌಡ ನಾಯಕ ಹಾಗೂ ಡಾ.ಶಿವರಾಜ ಪಾಟೀಲ್ ಅವರು ಆಗಮಿಸಲಿದ್ದಾರೆ. ೨೫ ವಿಧಾನ ಪರಿಷತ್ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಇದರ ಅಂಗವಾಗಿ ಜನ ಸ್ವರಾಜ್ ಯಾತ್ರೆಯಡಿ ಕೇಂದ್ರ, ರಾಜ್ಯ ಸರ್ಕಾರಗಳ ಯೋಜನೆಗಳನ್ನು ಗ್ರಾಮ ಪಂಚಾಯತ, ನಗರಸಭೆ, ಪಟ್ಟಣ ಪಂಚಾಯತ ಹಾಗೂ ಪುರಸಭೆ ಸದಸ್ಯರಲ್ಲಿ ಜಾಗೃತಿ ಮೂಡಿಸಿ, ಪಕ್ಷದ ಅಭ್ಯರ್ಥಿಗೆ ಮತ ನೀಡುವಂತೆ ಅವರಲ್ಲಿ ಜಾಗೃತಿ ಮೂಡಿಸಲಾಗುತ್ತದೆ.
ಸ್ಥಳೀಯ ಆಡಳಿತ ಮಂಡಳಿಗೆ ಕೇಂದ್ರ, ರಾಜ್ಯ ಸರ್ಕಾರ ಭಾರೀ ಮೊತ್ತದ ಅನುದಾನ ಬಿಡುಗಡೆಗೊಳಿಸಿ, ಅಭಿವೃದ್ಧಿ ಕಾರ್ಯಗಳಿಗೆ ನೆರವು ನೀಡಲಾಗುತ್ತದೆಂದು ಹೇಳಿದರು. ಈ ಸಂದರ್ಭದಲ್ಲಿ ಗ್ರಾಮೀಣ ಬಿಜೆಪಿ ಮೋರ್ಚಾದ ಅಧ್ಯಕ್ಷ ಶಂಕರಗೌಡ, ನಗರ ಬಿಜೆಪಿ ಮೋರ್ಚಾದ ಅಧ್ಯಕ್ಷ ಬಿ.ಗೋವಿಂದ ಹಾಗೂ ರೆಡ್ಡಿ ಅವರು ಉಪಸ್ಥಿತರಿದ್ದರು.