ನ.೧೯: ಕೆದಂಬಾಡಿ ರಾಮಯ್ಯಗೌಡರ ಪ್ರತಿಮೆ ಲೋಕಾರ್ಪಣೆ  


ಮಂಗಳೂರು, ನ.೧೨- ೧೮೩೭ರಲ್ಲಿ ಬ್ರಿಟಿಷರ ವಿರುದ್ಧ ರೈತ ಸೇನೆ ಕಟ್ಟಿ, ಸ್ಮರಣೀಯ ಹೋರಾಟ ನಡೆಸಿದ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ ನವೆಂಬರ್ ೧೯ರ ಶನಿವಾರ ಮುಖ್ಯಮಂತ್ರಿಗಳಿಂದ ಅದ್ದೂರಿಯಾಗಿ ಲೋಕಾರ್ಪಣೆಯಾಗಲಿದೆ ಎಂದು ಶಾಸಕ ಡಿ. ವೇದವ್ಯಾಸ ಕಾಮತ್ ತಿಳಿಸಿದ್ದಾರೆ.
ನವೆಂಬರ್ ೧೧ರ ಶುಕ್ರವಾರ ಮಂಗಳೂರು ಮಹಾನಗರ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ಕೆದಂಬಾಡಿ ರಾಮಯ್ಯಗೌಡರ ಕಂಚಿನ ಪ್ರತಿಮೆ ಲೋಕಾರ್ಪಣೆ ಕುರಿತು ಹಮ್ಮಿಕೊಂಡಿದ್ದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜನಸಾಮಾನ್ಯರ ಮತ್ತು ರೈತರ ಮೇಲೆ ಬ್ರಿಟಿಷರ ಕ್ರೌರ್ಯ ಹಾಗೂ ದಬ್ಬಾಳಿಕೆಯನ್ನು ಸಹಿಸದೆ ಕೆದಂಬಾಡಿ ರಾಮಯ್ಯ ಗೌಡರು ಬ್ರಿಟಿಷರ ವಿರುದ್ಧ ರೈತ ಸೇನೆ ಕಟ್ಟಿ ರಣ ಕಹಳೆ ಮೊಳಗಿಸಿದ್ದರು, ಆ ಪರಿಣಾಮ ಬೆಳ್ಳಾರೆ, ಪುತ್ತೂರು, ಬಂಟ್ವಾಳ, ಮಂಗಳೂರು ಸೇರಿದಂತೆ ಕೆದಂಬಾಡಿ ರಾಮಯ್ಯ ಗೌಡರ ಮನೆಯಿಂದ ಹೊರಟ ಸೈನ್ಯ ಸುಮಾರು ೯೦ ಕಿ.ಮೀ. ದೂರದ ಪ್ರದೇಶದಲ್ಲಿ ರಾಮಯ್ಯ ಗೌಡರ ನೇತೃತ್ವದಲ್ಲಿ ೧೩ ದಿನಗಳ ಕಾಲ ಸ್ಥಾಪಿತ ಸರಕಾರವನ್ನು ಮುನ್ನಡೆಸಲಾಯಿತು. ಇದು ಭಾರತದ ನೆಲದಲ್ಲಿ ಬ್ರಿಟಿಷರಿಗೆ ಒದಗಿದ ಪ್ರಥಮ ಸೋಲು ಹಾಗೂ ಭಾರತದ ಸಾಮಾನ್ಯ ಜನರಿಗೆ ಬ್ರಿಟಿಷರ ವಿರುದ್ಧ ದೊರಕಿದ ಪ್ರಪ್ರಥಮ ಜಯ. ಈ ಹೋರಾಟದಲ್ಲಿ ಹುತಾತ್ಮರಾದ ಅವರು ಹೋರಾಟವನ್ನು ಶಾಶ್ವತವಾಗಿ ಭಾರತದ ಇತಿಹಾಸ ಪುಟಗಳಲ್ಲಿ ದಾಖಲಿಸಿ ಸ್ಮಾರಕ ನಿರ್ಮಾಣದ ಮೂಲಕ ಅವರ ಹೆಸರನ್ನು ಈ ನಾಡಿನಲ್ಲಿ ಶಾಶ್ವತವಾಗಿ ಉಳಿಸಲು ಮಂಗಳೂರಿನ ಚಾರಿತ್ರಿಕ ಸ್ಥಳವಾದ ಬಾವುಟಗುಡ್ಡೆಯಲ್ಲಿ ಸಮರ ವೀರ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆಯನ್ನು ನ.೧೯ರಂದು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಹಾಗೂ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ನಿರ್ಮಲಾನಂದ ಮಹಾ ಸ್ವಾಮೀಜಿಯವರು ಅದ್ದೂರಿಯಾಗಿ ಲೋಕಾರ್ಪಣೆ ಮಾಡುವರು ಎಂದು ತಿಳಿಸಿದರು. ನಂತರ ನೆಹರೂ ಮೈದಾನದ ಫುಟ್ ಬಾಲ್ ಕ್ರೀಡಾಂಗಣದಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಅಂದಾಜು ೨೫,೦೦೦ಕ್ಕೂ ಹೆಚ್ಚು ಜನರು ಭಾಗವಹಿಸುವರು. ಅಲ್ಲಿ ವಿವಿಧ ಇಲಾಖೆಗಳ ವತಿಯಿಂದ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ಸಹ ನಡೆಯಲಿದೆ ಎಂದು ವಿವರಿಸಿದರು.
ಇದಕ್ಕೆ ಸಂಬಂಧಿಸಿದಂತೆ ಸುಸಜ್ಜಿತ ವೇದಿಕೆ ನಿರ್ಮಾಣ, ಎಲ್‌ಇಡಿ ಅಳವಡಿಕೆ, ಕುರ್ಚಿಗಳು, ಅತಿಥಿಗಳಿಗೆ ಉಟೋಪಚಾರ, ಕುಡಿಯುವ ನೀರು, ಶೌಚಾಲಯಗಳ ವ್ಯವಸ್ಥೆ, ಪುತ್ತೂರು, ಸುಳ್ಯ, ಬೆಳ್ತಂಗಡಿ, ಕೊಡಗು ಸೇರಿದಂತೆ ವಿವಿಧೆಡೆಯಿಂದ ಬರುವ ಕೆದಂಬಾಡಿ ರಾಮಯ್ಯ ಗೌಡರ ಅಭಿಮಾನಿಗಳನ್ನು ಕರೆ ತರಲು ಅಗತ್ಯ ಬಸ್ ಗಳ ವ್ಯವಸ್ಥೆ ಮಾಡಿಕೊಳ್ಳಬೇಕಿದೆ. ಕಾರ್ಯಕ್ರಮದ ಆಯೋಜನೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಪ್ರಮುಖ ಪಾತ್ರ ವಹಿಸಬೇಕಾಗಿದ್ದು, ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಗುವುದು. ಈ ಕಾರ್ಯಕ್ರಮಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಚಿವರು, ದಕ್ಷಿಣ ಕನ್ನಡ ಹಾಗೂ ಕೊಡಗಿನ ಶಾಸಕರು ಆಗಮಿಸಲಿದ್ದಾರೆ ಎಂದು ಹೇಳಿದರು. ಅಂದು ವಿವಿಧೆಡೆಯಿಂದ ಮಂಗಳೂರಿಗೆ ಬಸ್‌ಗಳಲ್ಲಿ ಆಗಮಿಸುವ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಅಗತ್ಯ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಡಬೇಕು. ಸಂಚಾರಕ್ಕೆ ತೊಂದರೆ ಆಗದಂತೆ ಎಚ್ಚರ ವಹಿಸಬೇಕು. ಈ ನಿಟ್ಟಿನಲ್ಲಿ ಸೂಕ್ತ ಭದ್ರತೆ ಒದಗಿಸುವಂತೆ ಟ್ರಾಫಿಕ್ ವಿಭಾಗದ ಡಿಸಿಪಿ ದಿನೇಶ್ ಅವರಿಗೆ ಶಾಸಕರು ಸೂಚಿಸಿದರು. ಜಿಲ್ಲೆಯ ಸಾರ್ವಜನಿಕರು ಹಾಗೂ ಸರ್ಕಾರಿ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಈ ಕಾರ್ಯಕ್ರಮದಲ್ಲಿ ಸರ್ವ ಜನಾಂಗದವರು ಭಾಗವಹಿಸಬೇಕು ಎಂದವರು ಮನವಿ ಮಾಡಿದರು. ಮಂಗಳೂರು ಮೇಯರ್ ಜಯಾನಂದ ಅಂಚನ್, ಉಪ ಮೇಯರ್ ಪೂರ್ಣಿಮಾ, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಸಂಚಾರ ಮತ್ತು ಅಪರಾಧ ವಿಭಾಗದ ಡಿಸಿಪಿ ರಮೇಶ್ ಉಪಸ್ಥಿತರಿದ್ದರು. ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಉಸ್ತುವಾರಿ ಸಮಿತಿ ಅಧ್ಯಕ್ಷ ಕಿರಣ್ ಬುಡ್ಲೆಗುತ್ತು, ಪ್ರಧಾನ ಕಾರ್ಯದರ್ಶಿ ರಕ್ಷಿತ್, ಆನಂದ್, ಸುರೇಶ್ ಬೈಲು, ಶರಣ್, ಭಾಸ್ಕರ್ ದೇವಪ್ಪ ಮತ್ತಿತರರಿದ್ದರು.