ನ.೧೮ ರಂದು ಸಮುದಾಯ ಆರೋಗ್ಯ ಅಧಿಕಾರಿಗಳ ನೌಕರರ ಸಂಘದ ಧರಣಿ

ದಾವಣಗೆರೆ.ನ.೧೬: ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳ ಧೋರಣೆ ವಿರೋಧಿಸಿ ಹಾಗೂ ಶಾಸನಬದ್ಧ ಹಕ್ಕುಗಳಿಗೆ ಒತ್ತಾಯಿಸಿ ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ಅಧಿಕಾರಿಗಳ ನೌಕರರ ಸಂಘದಿಂದ  ನ. ೧೮ ರಂದು ರಾಜ್ಯಮಟ್ಟದ ಪ್ರತಿಭಟನೆಗೆ ಮುಂದಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಸಿ. ವಸಂತ್ ಕುಮಾರ್ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ೨೮ ಜಿಲ್ಲೆಗಳಲ್ಲಿ ವಿವಿಧ‌ ಸಮುದಾಯ ಆರೋಗ್ಯ ಅಧಿಕಾರಿಗಳು ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟಿಸಲಾಗುವುದು ಎಂದರು.ನ. ೧೮ ರಂದು ಬೆಳಿಗ್ಗೆ ೧೦.೩೦ ರಿಂದ ಸಂಜೆ ೪.೩೦ ವರೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳ ಕಚೇರಿ ಮುಂಭಾಗದಲ್ಲಿ  ಧರಣಿ ನಡೆಸಲಾಗುವುದು ಎಂದರು.ನಮ್ಮ ಬೇಡಿಕೆಗಳಾದ ಸಮುದಾಯ ಆರೋಗ್ಯ ಅಧಿಕಾರಿಗಳನ್ನು ಕಾಯಂಗೊಳಿಸಬೇಕು, ಇತರೆ ರಾಜ್ಯಗಳಲ್ಲಿ ೧೫ ಸಾವಿರ ರೂ. ಪ್ರೋತ್ಸಾಹ ಧನ ನೀಡುತ್ತಿದ್ದು, ನಮಗೂ  ಇನ್ಸೆಂಟಿವ್ ಹೆಚ್ಚಿಸಬೇಕು, ೧೨ಪ್ಯಾಕೇಜ್ ಸರ್ವೀಸ್ ಬಿಟ್ಟು ಬೇರೆ ಒತ್ತಡ ಹೇರಬಾರದು, ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ಉನ್ನತೀಕರಿಸಬೇಕು ಹಾಗೂ ಅಂತರ್ ಜಿಲ್ಲಾ ವರ್ಗಾವಣೆ ನೀಡಬೇಕು ಎಂದು ಆಗ್ರಹಿಸಲಾಗುವುದು ಎಂದರು.ಸುದ್ದಿಗೋಷ್ಠಿಯಲ್ಲಿ ಚಿತ್ರ ಕಲಾವಿದ ರವೀಂದ್ರ ಅರಳಗುಪ್ಪಿ, ಸಂತೋಷ್ ದಾವಣಗೆರೆ, ಆಶ್ರಿತ್ ಮಲ್ಲಿಂಗಡ, ಅನಿಲ್ ಹಾಗೂ ನಿಂಗೋಜಿ ರಾವ್ ಉಪಸ್ಥಿತರಿದ್ದರು.