ನ.೧೮ರಂದು ಟೋಲ್‌ಗೇಟ್‌ ವಿರುದ್ಧ ಕಾಲ್ನಡಿಗೆ ಜಾಥಾ: ರೈ 

ಮಂಗಳೂರು, ನ.೧೫- ಸುರತ್ಕಲ್‌ನಲ್ಲಿರುವ ಟೋಲ್‌ಗೇಟ್ ವಿರುದ್ಧ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಉಭಯ ಜಿಲ್ಲೆಗಳ ಸಮಾನಮನಸ್ಕ ಸಂಘಟನೆಗಳು ತಮ್ಮ ಹಗಲು ರಾತ್ರಿ ಹೋರಾಟದ ಮುಂದುವರಿದ ಭಾಗವಾಗಿ ನ.18ರಂದು ಕಾಲ್ನಡಿಗೆ ಜಾಥಾ ನಡೆಸಲು ತೀರ್ಮಾನಿಸಿವೆ ಎಂದು ಮಾಜಿ ಸಚಿವ, ಹಿರಿಯ ಕಾಂಗ್ರೆಸ್‌ ನಾಯಕ ರಮಾನಾಥ ರೈ ಅವರು ತಿಳಿಸಿದರು.  

ಸುದ್ದಿಗೋಷ್ಠಿಯಲ್ಲಿ ನಿನ್ನೆ ಮಾತನಾಡಿದ ಅವರು, ನ.18ರಂದು ಅಪರಾಹ್ನ 3 ಗಂಟೆಗ ಸುರತ್ಕಲ್ ತಡಂಬೈಲ್‌ನಿಂದ ಜಾತ್ಯತೀತ ಸಂಘಟನೆಗಳು ಧರಣಿ ವೇದಿಕೆಯವರೆಗೆ ಈ ಜಾಥಾ ನಡೆಸಲಿವೆ. ಕಳೆದ 18 ದಿನಗಳಿಂದ ಹಗಲು ರಾತ್ರಿ ಧರಣಿ ನಡೆಸಲಾಗುತ್ತಿದೆ. ಆದರೆ ಈ ಬಗ್ಗೆ ಜನಪ್ರತಿನಿಧಿಗಳು, ಜಿಲ್ಲಾಡಳಿತ ಹೋರಾಟಗಾರರ ಜತೆ ಮಾತುಕತೆ ನಡೆಸದೆ ನಿರ್ಲಕ್ಷ್ಯ ವಹಿಸಿದೆ. ಟೋಲ್‌ಗೇಟ್ ನಿಯಮಬಾಹಿರ ಎಂದು ಸರಕಾರವೇ ಒಪ್ಪಿಕೊಂಡಿದ್ದರೂ ಅದನ್ನು ತೆರವುಗೊಳಿಸುವ ಕಾರ್ಯ ಮಾಡಿಲ್ಲ. ಕನಿಷ್ಠ ಧರಣಿ ನಡೆಸುತ್ತಿರುವ ಹೋರಾಟಗಾರರ ಜತೆ ಮಾತುಕತೆ ನಡೆಸುವ ಸೌಜನ್ಯವನ್ನೂ ತೋರಿಲ್ಲ. ಹೀಗಾಗಿ ಹೋರಾಟವನ್ನು ಇದೀಗ ತಾಲೂಕು, ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸಲು ನಿರ್ಧರಿಸಲಾಗಿದೆ. ಇದಕ್ಕೆ ಪೂರಕವಾಗಿ ಈ ಜಾಥಾವನ್ನು ಆಯೋಜಿಸಲಾಗಿದೆ. ಸುರತ್ಕಲ್ ಟೋಲ್‌ಗೇಟ್ ಆರಂಭವಾದಾಗ ಹೆದ್ದಾರಿ ಪ್ರಾಧಿಕಾರದ ನಿಯಮದಂತೆ ನಿರ್ದಿಷ್ಟ ವ್ಯಾಪ್ತಿಯಲ್ಲಿ ಬೇರೆ ಟೋಲ್ ಗೇಟ್ ಇರಲಿಲ್ಲ. ಸುಮ್ಮನೆ ಜನರ ಮನಸ್ಸನ್ನು ಬೇರೆಡೆ ಸೆಳೆಯುವ ಸಲುವಾಗಿ ಬಿಜೆಪಿಯ ಜನಪ್ರತಿನಿಧಿಗಳು ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಬಿಜೆಪಿಯವರು ಹಿಂದೆ ಜಿಎಸ್‌ಟಿ ಜಾರಿಗೊಳಿಸಲು ಮುಂದಾದಾಗ, ಆಧಾರ್ ಕಾರ್ಡ್ ಕಡ್ಡಾಯಗೊಳಿಸಲು ಮುಂದಾದಾಗಲೂ ವಿರೋಧ ವ್ಯಕ್ತಪಡಿಸಿದ್ದರು. ಬಳಿಕ ಅವರು ಅಧಿಕಾರಕ್ಕೆ ಬಂದು ಅದನ್ನು ಮಾಡಿದ್ದಾರೆ. ಹೀಗೆ ಸುಳ್ಳು ಹೇಳಿಕೊಂಡು ಜನರ ಓಟು ಪಡೆಯುವುದನ್ನು ಮಾತ್ರ ಬಿಜೆಪಿ ಮಾಡುತ್ತಿದ್ದು, ಜನಪರ ಕೆಲಸಗಳನ್ನು ಮಾಡುತ್ತಿಲ್ಲ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಮಾಜಿ ಸಚಿವ ರೈ ಪ್ರತಿಕ್ರಿಯಿಸಿದರು. ಸುದ್ದಿಗೋಷ್ಠಿಯನ್ನುದ್ದೇಶಿಸಿ ಸಿಪಿಎಂ ಮುಖಂಡರಾದ ಯಾದವ ಶೆಟ್ಟಿ, ಶೇಖರ್, ರೈತ ಮುಖಂಡ ರವಿಕಿರಣ ಪುಣಚ, ಜೆಡಿಎಸ್ ಯುವ ಘಟಕದ ಅಧ್ಯಕ್ಷ ಅಕ್ಷಿತ್ ಸುವರ್ಣ, ದಸಂಸ ಮುಖಂಡ ರಘು ಎಕ್ಕಾರು, ಡಿವೈಎಫ್‌ಐ ಜಿಲ್ಲಾಧ್ಯಕ್ಷ ಇಮ್ತಿಯಾಝ್ ಬಿ.ಕೆ. ಮಾತನಾಡಿದರು.