ನ.೧೬ ಬೆಂಗಳೂರು ತಂತ್ರಜ್ಞಾನ ಶೃಂಗ ಸಭೆ

ಬೆಂಗಳೂರು,ನ.೮- ಬೆಂಗಳೂರು ತಂತ್ರಜ್ಞಾನ ಶೃಂಗ ಸಭೆಯ (ಬಿಟಿಎಸ್) ೨೫ನೇ ವರ್ಷದ ಸಮಾವೇಶ ಈ ತಿಂಗಳ ೧೬ ರಿಂದ ೧೮ರವರೆಗೂ ನಡೆಯಲಿದೆ. ಈ ಶೃಂಗಸಭೆಯನ್ನು ಪ್ರಧಾನಿ ನರೇಂದ್ರಮೋದಿ ಅವರು ಉದ್ಘಾಟಿಸಲಿದ್ದಾರೆ ಎಂದು ಐಟಿ-ಬಿಟಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್ ಅಶ್ವತ್ಥ ನಾರಾಯಣ ಹೇಳಿದರು.ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ತಂತ್ರಜ್ಞಾನ ಶೃಂಗ ಸಭೆಯ (ಬಿಟಿಎಸ್) ೨೫ನೇ ವರ್ಷದ ಸಮಾವೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರಮೋದಿ ಅವರು ಮಾತನಾಡಲಿದ್ದು, ಜಾಗತಿಕ ತಂತ್ರಜ್ಞಾನ ನಕ್ಷೆಯಲ್ಲಿ ಈ ಶೃಂಗಸಭೆ ಪ್ರಮುಖವಾಗಿದೆ ಎಂದರು.ಈ ಶೃಂಗಸಭೆಯಲ್ಲಿ ೨೦ ದೇಶಗಳ ೩೫೦ ತಜ್ಞರು, ೫೭೫ ಪ್ರದರ್ಶಕರು ಭಾಗಿಯಾಗಲಿದ್ದು, ಸುಮಾರು ೫೦ ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು. ನವೋದ್ಯಮಗಳನ್ನು ಪ್ರಸ್ತುತಪಡಿಸಲು ಸ್ಟಾರ್ಟಪ್‌ಗಳು ಮತ್ತು ಯುನಿಕಾರ್ನ್‌ಗಳ ಅತಿ ದೊಡ್ಡ ಸಭೆ ಇದಾಗಿದೆ.
ಈ ಸಮಾವೇಶದ ಪ್ರಮುಖ ಥೀಮ್ ಟೆಕ್ ೪ ನೆಕ್ಸ್ಟ್ ಜನರೇಷನ್ ಎಂದಾಗಿದ್ದು, ಇದು ಎಲೆಕ್ಟ್ರಾನಿಕ್, ಐಟಿ, ಡೀಪ್‌ಟೆಕ್, ಬಯೋಟೆಕ್ ಮತ್ತು ಸ್ಟಾರ್ಟಪ್‌ಗಳ ಮೇಲೆ ಕೇಂದ್ರೀಕೃತವಾಗಿದೆ ಎಂದು ಅವರು ಹೇಳಿದರು.ಬೆಂಗಳೂರಿನ ಹೆಗ್ಗುರುತಾಗಿರುವ ಶೃಂಗಸಭೆಯ ೨೫ನೇ ವರ್ಷದ ಸಂಭ್ರಮಾಚರಣೆಯ ಅಂಗವಾಗಿ ರಜತಮಹೋತ್ಸವ ಸ್ಮರಣ ಪದಕವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅನಾವರಣಗೊಳಿಸಿ ಬೆಂಗಳೂರಿನಲ್ಲಿ ೨೫ಕ್ಕೂ ಅಧಿಕ ವರ್ಷ ಸೇವೆ ಪೂರ್ಣಗೊಳಿಸಿದ ಐಟಿಇ ಮತ್ತು ಬಯೋಟೆಕ್ ಕ್ಷೇತ್ರದ ೩೫ ಕಂಪನಿಗಳನ್ನು ಗೌರವಿಸಲಿದ್ದಾರೆ ಎಂದು ಸಚಿ ಡಾ. ಸಿ.ಎನ್ ಅಶ್ವತ್ಥನಾರಾಯಣ ಹೇಳಿದರು.
ಈ ಶೃಂಗಸಭೆಯಲ್ಲಿ ಫ್ರೆಂಚ್ ದೇಶದ ಅಧ್ಯಕ್ಷ ಇಮ್ಯಾನುಯಲ್ ಮ್ಯಾಕ್ರೋಸ್ ವರ್ಚುವಲ್ ಮೂಲಕ ಭಾಗಿಯಾಗಲಿದ್ದು, ಯುಎಇಯ ಸಚಿವರಾದ ಓಮರ್‌ಬಿನ್ ಸುಲ್ತಾನ್ ಅಲ್ ಉಲಾಮ, ಆಸ್ಟ್ರೇಲಿಯಾದ ವಿದೇಶಾಂಗ ಸಹಾಯಕ ಸಚಿವ ಟಿಮ್‌ವ್ಯಾಟ್ಸ್, ಪಿನ್‌ಲ್ಯಾಂಡ್‌ನ ವಿಜ್ಞಾನ ತಂತ್ರಜ್ಞಾನ ಸಚಿವ ಪೆಟ್ರಿಹ್ಯಾಂಕೋನನ್, ಅಮೆರಿಕದ ಕೈಂಡ್ರಿಯಲ್ ಸಿಇಓ ಮಾರ್ಟಿನ್ ಶೂಟರ್, ಭಾರತದ ಮೊದಲ ಯುನಿಕಾರ್ನ್ ಇನ್‌ಮೊಬಿ ಸಂಸ್ಥಾಪಕ ನವೀನ್ ತಿವಾರಿ ಸೇರಿದಂತೆ ಹಲವು ದಿಗ್ಗಜ ತಂತ್ರಜ್ಞಾನ ಉದ್ಯಮಿಗಳು ಭಾಗಿಯಾಗುವರು ಎಂದರು.ಸುದ್ದಿಗೋಷ್ಠಿಯಲ್ಲಿ ಐಟಿ-ಬಿಟಿ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಡಾ.ಇ.ವಿ ರಮಣರೆಡ್ಡಿ, ಜಂಟಿ ನಿರ್ದೇಶಕ ಮೀನಾ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.