ನ.೧೪ ರಿಂದ ಜೆಡಿಎಸ್ ಪಂಚರತ್ನ ಯಾತ್ರೆ

ಬೆಂಗಳೂರು,ನ.೧೨- ಮಳೆಯಿಂದ ಮುಂದೂಡಲಾದ ಜೆಡಿಎಸ್‌ನ ’ಪಂಚರತ್ನ ರಥಯಾತ್ರೆ’ ನ. ೧೪ ರಿಂದ ಆರಂಭವಾಗಲಿದೆ. ನ. ೧ ರಂದು ಕೋಲಾರದ ಮುಳಬಾಗಿಲುನಲ್ಲಿ ಪಂಚರತ್ನ ರಥಯಾತ್ರೆಗೆ ಚಾಲನೆ ನೀಡಲಾಗಿತ್ತಾದರೂ ಮಳೆಯಿಂದ ಮುಂದೂಡಲಾಗಿತ್ತು.
ಈಗ ನ. ೧೪ ರಿಂದ ಯಾತ್ರೆ ಪುನಾರಂಭವಾಗಲಿದೆ. ಈಗಾಗಲೇ ನಿಗದಿಪಡಿಸಿರುವಂತೆ ಮುಳಬಾಗಿಲು ವಿಧಾನಸಭಾ ಕ್ಷೇತ್ರದಿಂದ ಈ ರಥಯಾತ್ರೆ ಆರಂಭವಾಗಲಿದ್ದು, ಡಿ. ೬ರವರೆಗೂ ನಡೆಯಲಿದೆ. ಈ ರಥಯಾತ್ರೆ ಸಂದರ್ಭದಲ್ಲಿ ಜೆಡಿಎಸ್ ಪಕ್ಷ ಆಯಾ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸುವ ಸಾಧ್ಯತೆ ಇದೆ. ಹಾಗೆಯೇ, ಸಂಭವನೀಯ ಅಭ್ಯರ್ಥಿಗಳಿಂದ ಜೆಡಿಎಸ್‌ನಿಂದ ಸ್ಪರ್ಧಿಸಿ ಗೆದ್ದ ಮೇಲೆ ಯಾವುದೇ ಕಾರಣಕ್ಕೂ ಪಕ್ಷಾಂತರ ಮಾಡುವುದಿಲ್ಲ ಎಂಬ ಪ್ರಮಾಣವಚನವನ್ನೂ ಮಾಡಿಸಲಾಗುತ್ತದೆ.
ಈ ರಥಯಾತ್ರೆ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಗ್ರಾಮವಾಸ್ತವ್ಯವನ್ನೂ ನಡೆಸಲಿದ್ದಾರೆ. ಈ ಯಾತ್ರೆ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು ಜಿಲ್ಲೆಗಳ ವಿಧಾನಸಭಾ ಕ್ಷೇತ್ರಗಳಲ್ಲಿ ಸಾಗಲಿದ್ದು, ವಿಧಾನಮಂಡಲದ ಚಳಿಗಾಲದ ಅಧಿವೇಶನದ ನಂತರ ೨ನೇ ಹಂತದ ಪಂಚರತ್ನ ರಥಯಾತ್ರೆ ನಡೆಯಲಿದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.