ನ.೧೩ ಕ್ಕೆ ಪೀಠ ಉಳಿಸಿ ಜಾಗೃತಿ ಸಮಿತಿಗೆ ಉತ್ತರ; ತರಳಬಾಳು ಮಠದ ಭಕ್ತರ ನಿರ್ಧಾರ

ದಾವಣಗೆರೆ.ನ.೮; ಈ ಮೊದಲು ಮಠದಲ್ಲಿ ಇದ್ದವರೇ ಮಠಕ್ಕೆ ದ್ರೋಹ ಬಗೆದಿದ್ದಾರೆ.ತರಳಬಾಳು ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರ ವಿರುದ್ಧ ಆರೋಪ ಮಾಡಿದ ಐದು ಮಂದಿಯ  ಆರೋಪಗಳಿಗೆ ನ.೧೩ ರಂದು ಸೂಕ್ತ ಉತ್ತರ ನೀಡಲಿದ್ದೇವೆ ಎಂದು ಮಠದ ಭಕ್ತರು ಒಮ್ಮತದಿಂದ ನಿರ್ಧಾರ ಕೈಗೊಂಡಿದ್ದಾರೆ.ನಗರದ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಸಮುದಾಯ ಭವನದ ತರಳಬಾಳು ಸಭಾಭವನದಲ್ಲಿ ನಡೆದ ತುರ್ತು ಸಭೆಯಲ್ಲಿ ಭಕ್ತರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.ನವೆಂಬರ್ 13ರಂದು ಬೆಳಿಗ್ಗೆ 11ಕ್ಕೆ ಇದೇ ಕಲ್ಯಾಣ ಮಂಟಪದಲ್ಲಿ ಆರೋಪ ಮಾಡಿದವರನ್ನು ಕರೆಸಿ ಮಠದ ಭಕ್ತರೇ ಉತ್ತರ ನೀಡೋಣ. ಶ್ರೀಗಳನ್ನು ಆಹ್ವಾನಿಸುವುದು ಬೇಡ’ ಎಂದು ಸಮಾಜದ ಮುಖಂಡ ಅಣಬೇರು ರಾಜಣ್ಣ ಸಭೆಗೆ ತಿಳಿಸಿದರು.
ತರಳಬಾಳು ಪೀಠ ಉಳಿಸಿ ಜಾಗೃತಿ ಸಮಿತಿಯ ವಕೀಲ ಎಂ. ಸಿದ್ದಯ್ಯ, ಆನಗೋಡು ಗ್ರಾಮದ ಮುಖಂಡ ಎಚ್. ನಂಜುಂಡಪ್ಪ, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಎಂ. ವೀರಭದ್ರಪ್ಪ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಸ್.ಟಿ. ಶಾಂತಗಂಗಾಧರ್, ಬೆಂಗಳೂರಿನ ಮಾದನಬಾವಿ ರುದ್ರಪ್ಪಗೌಡ ಅವರು ಬೆಳಿಗ್ಗೆ ಪತ್ರಿಕಾಗೋಷ್ಠಿಯಲ್ಲಿ ಶ್ರೀಗಳ ವಿರುದ್ಧ ಆರೋಪ ಮಾಡಿದ್ದರು.
ಸಿದ್ದಯ್ಯ 8 ಜನ ಸಂಬಂಧಿಕರಿಗೆ ಹೇಗೆ ನೌಕರಿ ಕೊಡಿಸಿದರು. ವೀರಭದ್ರಪ್ಪ ಹೇಗೆ ಎಂಎಲ್‌ಸಿ ಆದರು. ಶಿವನಕೆರೆ ಬಸಲಿಂಗಪ್ಪ ಹೇಗೆ ಹಣ ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ’
ಶ್ರೀಗಳ ಹಾಗೂ ಮಠದ ವಿರುದ್ಧ ಆರೋಪ ಮಾಡಿದವರಿಗೆ ತಕ್ಕ ಶಾಸ್ತಿ ಮಾಡೋಣ’ ಎಂದು ಕೆಲವು ಭಕ್ತರು ಹೇಳಿದರು, ಮತ್ತೆ ಕೆಲವರು ‘ಹಾಗೆ ಮಾಡಿದರೆ ಮಠಕ್ಕೆ ಹಾಗೂ ಶ್ರೀಗಳಿಗೆ ಕೆಟ್ಟ ಹೆಸರು ಬರುತ್ತದೆ. ಶಿಸ್ತು ಕಾಪಾಡಿಕೊಂಡು, ಆಯ್ದ 10 ಮಂದಿ ಅವರ ಆರೋಪಗಳಿಗೆ ಉತ್ತರಿಸೋಣ’ ಎಂದು ಸಲಹೆ ನೀಡಿದರು.
ಸಮಾಜದ ಮುಖಂಡ ಚಂದ್ರಣ್ಣ  ‘ಸಿರಿಗೆರೆ ಮಠ ವಿಶ್ವದಲ್ಲಿ ಹೆಸರುವಾಸಿಯಾಗಿದೆ. ಇತರೆ ಮಠಗಳ ಸ್ವಾಮೀಜಿ ಹಾಗೂ ಭಕ್ತರು ಸಿರಿಗೆರೆ ಮಠವನ್ನು ಮಾದರಿಯಾಗಿರಿಸಿಕೊಂಡಿದ್ದಾರೆ. ಸಂಯಮ ಕಾಪಾಡೋಣ‘ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ್ ಹನಗವಾಡಿ ಮಾತನಾಡಿ, ‘ಸಿರಿಗೆರೆ ಮಠದಲ್ಲಿ ಪಾರದರ್ಶಕತೆ ಇರುವುದರಿಂದಲೇ ಕೋಟ್ಯಂತರ ಹಣ ಬರುತ್ತಿದೆ. ಒಂದು ತಂಡದಿಂದ ಮಠದ ವಿರುದ್ಧ ಷಡ್ಯಂತ್ರ ನಡೆದಿದೆ. ಸಮಸ್ಯೆಯನ್ನು ಸೂಕ್ಷ್ಮವಾಗಿ ಬಗೆಹರಿಸಿಕೊಳ್ಳೋಣ’ ಎಂದು ಹೇಳಿದರು.
ಮಹಾನಗರ ಪಾಲಿಕೆ ಮೇಯರ್ ಎಸ್‌.ಟಿ. ವೀರೇಶ್, ‘ಇದೊಂದು ವ್ಯವಸ್ಥಿತ ಷಡ್ಯಂತ್ರ. ದೇಶದ್ರೋಹಿಗಳಿಗೆ ಎಚ್ಚರಿಕೆ ಕೊಡೋಣ. ನಮ್ಮ ತಾಳ್ಮೆ ದೌರ್ಬಲ್ಯವಲ್ಲ. ಆರೋಪ ಮಾಡಿದವರು ಎಚ್ಚೆತ್ತುಕೊಳ್ಳದಿದ್ದರೆ ಸಮಾಜದ ಒಗ್ಗಟ್ಟು ಹೆಚ್ಚಾಗುತ್ತದೆ’ ಎಂದರು.
ಸಭೆಯಲ್ಲಿ ಸಂಗಮೇಶಗೌಡ್ರು, ವೀರೇಶ್ ಹನಗವಾಡಿ,  ಶಿವಗಂಗಾ ಬಸವರಾಜ್, ಎಚ್‌.ಡಿ.ಮಹೇಶ್, ಮಲ್ಲಿಕಾರ್ಜುನ ಕಬ್ಬೂರು, ಹಾಲುವರ್ತಿ ಮಹೇಶ್ವರ‌ಪ್ಪ, ಚಂದ್ರಪ್ಪ, ಹನುಮನಹಳ್ಳಿ ನಾಗೇಂದ್ರ, ತಿಪ್ಪಣ್ಣ, ಗಂಗಣ್ಣ, ತೀರ್ಥಪ್ಪ, ಶಶಿಧರ ಹೆಮ್ಮನಬೇತೂರು ಇದ್ದರು.