ನ. ೧೩ ಒಂದೇ ದಿನ ಸರಳ ಹಂಪಿ ಉತ್ಸವ

ಬಳ್ಳಾರಿ, ನ. ೯- ಈ ತಿಂಗಳ ೧೩ ರಂದು ಒಂದೇ ದಿನ ಇತಿಹಾಸ ಪ್ರಸಿದ್ಧ ಹಂಪಿ ಉತ್ಸವವನ್ನು ಸರಳವಾಗಿ ಆಚರಿಸಲು ಸರ್ಕಾರ ತೀರ್ಮಾನಿಸಿದೆ. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ವಿಜಯನಗರ ಸಾಮ್ರಾಜ್ಯದ ಗತವೈಭವ ಸಾರುವ ಹಂಪಿ ಉತ್ಸವವನ್ನು ಸರಳ ರೀತಿಯಲ್ಲಿ ಆಚರಿಸಲು ಜಿಲ್ಲಾಡಳಿತ ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ.
ಕೊರೊನಾದಿಂದಾಗಿ ಒಂದು ದಿನಕ್ಕೆ ಮಾತ್ರ ಹಂಪಿ ಉತ್ಸವವನ್ನು ಸೀಮಿತಗೊಳಿಸಲಾಗಿದೆ. ಯಾವುದೇ ವೇದಿಕೆ ಕಾರ್ಯಕ್ರಮಗಳಿಲ್ಲದೆ ಜನಪದ ಕಲಾತಂಡಗಳೊಂದಿಗೆ ಮೆರವಣಿಗೆ ಮತ್ತು ತುಂಗಾರತಿ ಮೂಲಕ ಉತ್ಸವ ನಡೆಸಲು ಜಿಲ್ಲಾಡಳಿತ ಮುಂದಾಗಿದೆ.
ಹಂಪಿ ಉತ್ಸವಕ್ಕಾಗಿ ರಾಜ್ಯ ಸರ್ಕಾರಕ್ಕೆ ಜಿಲ್ಲಾಡಳಿತ ೩೦ ಲಕ್ಷ ರೂ. ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಿದೆ. ಆದರೆ ಸರ್ಕಾರದಿಂದ ಹಣ ಬಿಡುಗಡೆಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.