ನ್ಯೂ ಹ್ಯಾಂಪ್‌ಶೈರ್‌ನಲ್ಲಿ ಟ್ರಂಪ್‌ಗೆ ಗೆಲುವು

ನ್ಯೂಯಾರ್ಕ್, ಜ.೨೪- ೨೦೨೦ರ ರೀತಿಯಲ್ಲೇ ೨೦೨೪ರಲ್ಲೂ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಹಾಗೂ ಜೋ ಬೈಡೆನ್ ನಡುವೆ ನೇರ ಹಣಾಹಣಿ ನಡೆಯುವ ಸಾಧ್ಯತೆ ಇದೆ. ಬಹುಮುಖ್ಯವೆಂದೇ ಗುರುತಿಸಲಾಗಿರುವ ನ್ಯೂ ಹ್ಯಾಂಪ್‌ಶೈರ್ ಪ್ರೈಮರಿಯಲ್ಲಿ ಭಾರತೀಯ ಮೂಲದ ನಿಕಿ ಹ್ಯಾಲೆ ವಿರುದ್ಧ ಭರ್ಜರಿ ೫೪.೬ರ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಟ್ರಂಪ್ ಮತ್ತೊಮ್ಮೆ ತನ್ನ ಖದರ್ ಪ್ರದರ್ಶಿಸಿದ್ದಾರೆ.
ಈಗಾಗಲೇ ಅಯೋವಾದಲ್ಲಿ ನಡೆದ ರಿಪಬ್ಲಿಕನ್ ಪಕ್ಷದ ಪ್ರೈಮರಿಯಲ್ಲಿ ಗೆಲುವು ಸಾಧಿಸಿದ್ದ ಟ್ರಂಪ್ ಇದೀಗ ನ್ಯೂ ಹ್ಯಾಂಪ್‌ಶೈರ್‌ನಲ್ಲೂ ತನ್ನ ಪರಾಕ್ರಮ ಪ್ರದರ್ಶಿಸಿದ್ದಾರೆ. ಈ ಮೂಲಕ ಟ್ರಂಪ್ ಅಯೋವಾ ಮತ್ತು ನ್ಯೂ ಹ್ಯಾಂಪ್‌ಶೈರ್ ಸ್ಪರ್ಧೆಗಳನ್ನು ಗೆದ್ದ ಆಧುನಿಕ ಯುಗದ ಮೊದಲ ಅಧಿಕಾರೇತರ ಜಿಒಪಿಯ ಅಭ್ಯರ್ಥಿಯಾಗಿದ್ದಾರೆ. ಅದರೆ ಅತ್ತ ಹಿನ್ನಡೆಯ ಹೊರತಾಗಿಯೂ ಪಕ್ಷದೊಳಗಿನ ಆಂತರಿಕ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ. ಇನ್ನು ಡೆಮಾಕ್ರಟಿಕ್ ಪಕ್ಷದ ಪ್ರೈಮರಿಯಲ್ಲಿ ಜೋ ಬೈಡೆನ್ ಅವರು ಗೆಲುವು ಸಾಧಿಸಿದ್ದಾರೆ. ಅತ್ತ ಹಿನ್ನಡೆಯ ಹೊರತಾಗಿಯೂ ರೇಸ್‌ನಲ್ಲಿ ಮುಂದುವರೆಯುವುದಾಗಿ ಹ್ಯಾಲೆ ತಿಳಿಸಿದ್ದಾರೆ. ಅಲ್ಲದೆ ೨೦೧೮, ೨೦೨೨ ಹಾಗೂ ೨೦೨೦ರ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಅವರು ರಿಪಬ್ಲಿಕನ್ ಪಕ್ಷವನ್ನು ಕೆಟ್ಟದಾಗಿ ಮುನ್ನಡೆಸಿದ್ದರು ಎಂದು ಹ್ಯಾಲೆ ಆರೋಪಿಸಿದ್ದಾರೆ.