ನ್ಯೂಯಾರ್ಕ್ ಪೈಪ್ ಬಾಂಬ್ ಸ್ಫೋಟ: ಉಲ್ಲಾಗೆ ಜೀವಾವಧಿ ಜೈಲುಸಜೆ

ನ್ಯೂಯಾರ್ಕ್, ಎ.೨೩- ನಾಲ್ಕು ವರ್ಷಗಳ ಹಿಂದೆ ನ್ಯೂಯಾರ್ಕ್‌ನ ಸಬ್‌ವ್ಹೇನಲ್ಲಿ ನಡೆದ ಪೈಪ್ ಬಾಂಬ್ ಸ್ಫೋಟದ ಆರೋಪಿ ಅಕಾಯೆದ್ ಉಲ್ಲಾಗೆ ಇಲ್ಲಿನ ನ್ಯಾಯಾಲಯವು ಜೀವಾವಧಿ ಜೈಲುಸಜೆ ವಿಧಿಸಲಾಗಿದೆ.
೨೦೧೭ರ ಡಿಸೆಂಬರ್ ೧೧ರಂದು ಸ್ಫೋಟ ಸಂಭವಿಸಿತ್ತು. ಆದರೆ ಅದೃಷ್ಟವಶಾತ್ ಘಟನೆಯಲ್ಲಿ ಯಾರೂ ಮೃತಪಟ್ಟಿರಲಿಲ್ಲ. ನಾಲ್ಕು ಮಂದಿ ಗಾಯಗೊಂಡಿದ್ದರು. ನಂತರ ಆರೋಪಿ ಅಕಾಯೆದ್‌ನನ್ನು ಬಂಧಿಸಲಾಗಿತ್ತು. ಆದರೆ ಅಕಾಯೆದ್ ವಿಚಾರಣೆಯ ವೇಳೆ, ತಾನು ಆತ್ಮಹತ್ಯೆ ನಡೆಸಲೆಂದೇ ಈ ರೀತಿ ಮಾಡಿದ್ದು, ಇಸ್ಲಾಮಿಕ್ ಸ್ಟೇಟ್ (ಐಎಸ್) ಪರವಾಗಿ ನಡೆದುಕೊಂಡಿಲ್ಲ ಎಂದು ತಿಳಿಸಿದ್ದ. ಆದರೆ ಇದೀಗ ಆರೋಪಿ ವಿರುದ್ಧ ಆರೋಪ ಸಾಬೀತಾಗಿದ್ದು, ಜೀವಾವಧಿ ಜೈಲುಸಜೆ ವಿಧಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಯುಎಸ್ ಸರ್ಕಿಟ್ ನ್ಯಾಯಾಧೀಶ ಸುಲ್ಲಿವ್ಯಾನ್, ಇದೊಂದು ನಿಜವಾದ ಅನಾಗರಿಕ ಮತ್ತು ಘೋರ ಅಪರಾಧವಾಗಿದೆ ಎಂದು ತಿಳಿಸಿದ್ದಾರೆ. ಅಕಾಯೆದ್ ಸ್ಥಳೀಯ ಕಟ್ಟಡ ನಿರ್ಮಾಣ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಅಲ್ಲಿಯೇ ಸುಲಭವಾಗಿ ಸಿಗುವ ವಸ್ತುಗಳಿಂದ ಪೈಪ್ ಬಾಂಬ್ ತಯಾರಿಸಿದ್ದ.