ನ್ಯೂಮೋನಿಯಾ ಮಾರಕ ರೋಗವನ್ನು ಆರಂಭದಲ್ಲಿಯೇ ಗುರುತಿಸಿ ಚಿಕಿತ್ಸೆ ನೀಡಿ: ಡಿಎಚ್‍ಒ


ಬಳ್ಳಾರಿ,ನ.16: ನ್ಯೂಮೋನಿಯಾದಂತಹ ತೀವ್ರ ಉಸಿರಾಟದ ತೊಂದರೆಯಿಂದ ಮಕ್ಕಳು ಸಂಕಷ್ಟಕ್ಕೀಡಾಗುವ ಜೊತೆಗೆ ಗಂಭೀರ ಆರೋಗ್ಯದ ಸಮಸ್ಯೆಗಳಿಗೆ ತುತ್ತಾಗುವುದನ್ನು ತಪ್ಪಿಸಲು ಗ್ರಾಮೀಣ ಮತ್ತು ನಗರ ಮಟ್ಟದಲ್ಲಿ ಆಸ್ಪತ್ರೆಗೆ ಬರುವ ಜನತೆಗೆ ಹಾಗೂ ಮಗುವಿನ ಆರೈಕೆಗೆ ಸಂಬಂಧಿಸಿದ ಉಸಿರಾಟದ ತೊಂದರೆಯನ್ನು ಗುರುತಿಸಿ ಚಿಕಿತ್ಸೆ ನೀಡಬೇಕು ಎಂದು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಲ್.ಜರ್ನಾಧನ ಅವರು ವೈದ್ಯಾಧಿಕಾರಿಗಳಿಗೆ, ಶೂಶ್ರೂಷಣಾಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಕಾರ್ಯಕ್ರಮದಡಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಭಾಂಗಣದಲ್ಲಿ “ನ್ಯೂಮೋನಿಯಾ ತಟಸ್ಥಗೊಳಿಸಲು ಸಾಮಾಜಿಕ ಅರಿವು ಮತ್ತು ಕ್ರಿಯೆಗಳನ್ನು ಯಶಸ್ವಿಯಾಗಿ ಅನುಸರಿಸುವುದು” ಎಂಬ ವಿಷಯದ ಕುರಿತು ಸೋಮವಾರದಂದು ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
2009 ರಲ್ಲಿ ಮೊದಲ ಬಾರಿಗೆ ಜಾಗತಿಕವಾಗಿ ವಿಶ್ವ ನ್ಯೂಮೋನಿಯಾ ದಿನಾಚರಣೆ ಆಚರಿಸುವ ಮೂಲಕ ವಿಶೇಷವಾಗಿ ಮಕ್ಕಳಲ್ಲಿ ಕಂಡುಬರುವ ಇದನ್ನು ನಿರ್ಲಕ್ಷಿಸಿದಲ್ಲಿ ಮರಣಾಂತಿಕ ಅಪಾಯವು ಸಹ ಬರಬಹುದು, ಇದಕ್ಕಾಗಿ ಬಾಲ್ಯದಲ್ಲಿಯೇ ಮಾರಕ ರೋಗಗಳ ವಿರುದ್ಧ ನೀಡುವ ಲಸಿಕೆಗಳನ್ನು ತಪ್ಪದೇ ಮಗುವಿಗೆ ಕೊಡಿಸಲು ಹಾಗೂ ಈ ಕುರಿತು ನಿಯಂತ್ರಿಸಲು ಸಾರ್ವಜನಿಕರಿಗೆ ಜಾಗೃತಿ ನೀಡಬೇಕು ಎಂದು ತಿಳಿಸಿದರು.
ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ.ಆರ್.ಅನೀಲಕುಮಾರ ಅವರು ಮಾತನಾಡಿ, ಮಗುವಿನ ಆರೋಗ್ಯದ ಸದೃಢತೆಗೆ ಉಸಿರಾಟ ಅತ್ಯಂತ ಮಹತ್ವ ಪಡೆದಿದೆ. ಒಂದು ನಿಮಿಷದ ಅವಧಿಯಲ್ಲಿ ಹುಟ್ಟಿನಿಂದ 2 ತಿಂಗಳುಗಳ ಒಳಗಿನ ಮಗು 60 ಕ್ಕಿಂತ ಹೆಚ್ಚು ಬಾರಿ, 2 ತಿಂಗಳಿನಿಂದ 12 ತಿಂಗಳೊಳಗಿನ ಮಗು 50 ಕ್ಕಿಂತ ಹೆಚ್ಚು ಬಾರಿ, 12 ತಿಂಗಳಿನಿಂದ 5 ವರ್ಷದೊಳಗಿನ ಮಗು 40 ಕ್ಕೂ ಹೆಚ್ಚು ಬಾರಿ ಉಸಿರಾಟ ಮಾಡಿದಲ್ಲಿ ಇದು ಉಸಿರಾಟದ  ತೊಂದರೆ, ಈ ಲಕ್ಷಣ ಇದ್ದಲ್ಲಿ ವೈದ್ಯರ ಬಳಿ ತೊರಿಸಬೇಕು ಎಂದು ಅವರು ಹೇಳಿದರು.
ಮನೆಯಲ್ಲಿ ಅತಿಸೂಕ್ಷ್ಮವೆನಿಸುವ ಧೂಳು ಅಪಾಯಕಾರಿ, ಸಾಮಾನ್ಯವಾಗಿ ಜ್ವರ, ಕೆಮ್ಮು, ನೆಗಡಿ, ಎದೆ ಭಾರದ ಅನುಭವ, ಹಸಿವಾಗದಿರುವುದು, ಆಯಾಸ ಮುಂತಾದವುಗಳು ಕಂಡು ಬಂದರೆ ಕ್ಷೇತ್ರ ಮಟ್ಟದಲ್ಲಿಯ ಆರೋಗ್ಯ ಸಿಬ್ಬಂದಿಯವರನ್ನು ಭೇಟಿಯಾಗಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅಧಿಕಾರಿ ಡಾ.ಪೂರ್ಣಿಮಾ ಕಟ್ಟಿಮನಿ, ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಇಂದ್ರಾಣಿ ವಿ, ಕುಷ್ಟರೋಗ ನಿರ್ಮೂಲನಾಧಿಕಾರಿ ಡಾ.ವೀರೆಂದ್ರ ಕುಮಾರ, ತರಬೇತುದಾರರಾದ ಡಾ.ಜಯಲಕ್ಷ್ಮೀ ನೇಕಾರ, ಡಾ.ಹೈದರ್‍ಅಲಿ, ಡಾ.ತರುಣ ಮತ್ತು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ವಿಹೆಚ್‍ಎನ್‍ಸಿ ಕನ್ಸ್‍ಲ್ಟಂಟ್ ರಾಘವೇಂದ್ರ ಸೇರಿದಂತೆ ಜಿಲ್ಲೆಯ ವೈದ್ಯಾಧಿಕಾರಿಗಳು, ಶೂಶ್ರೂಷಣಾಧಿಕಾರಿಗಳು ಹಾಗೂ ಇತರರು ಇದ್ದರು.