ನ್ಯೂಮೋನಿಯಾದ ಬಗ್ಗೆ ನಿರ್ಲಕ್ಷ್ಯ ವಹಿಸದೆ ಚಿಕಿತ್ಸೆ ಪಡೆಯಿರಿ

ಕಲಬುರಗಿ,ನ.12: ವಿಪರಿತ ಜ್ವರ, ಚಳಿಯಾಗುವುದು, ಉಸಿರುಗಟ್ಟುವುದು, ಕೆಮ್ಮು, ಕಫದಲ್ಲಿ ರಕ್ತ, ಮೈ-ಕೈ ನೋವು, ಸುಸ್ತು, ವಾಕರಿಕೆ, ಸಂಧಿವಾತ, ಸ್ನಾಯು ಎಳೆತದಂತಹ ಲಕ್ಷಣಗಳು ನ್ಯೂಮೋನಿಯಾಕ್ಕೆ ಸಂಬಂಧಿಸಿದ್ದರಿಂದ ಇದರ ಬಗ್ಗೆ ನಿರ್ಲಕ್ಷ್ಯ ಮಾಡದೆ ಸೂಕ್ತ ಚಿಕಿತ್ಸೆ ಪಡೆಯುವ ಮೂಲಕ ನಿವಾರಿಸಿಕೊಳ್ಳಬಹುದಾಗಿದೆ ಎಂದು ತಜ್ಞ ವೈದ್ಯ ಡಾ.ಪ್ರಮೋದ ಗುಂಡಗುರ್ತಿ ಸಲಹೆ ನೀಡಿದರು.
ನಗರದ ಶಹಾಬಜಾರ ಮಹಾದೇವ ನಗರದಲ್ಲಿರುವ ಸ್ವಾತಿ ಮತ್ತು ಶಿವಾ ವಿದ್ಯಾ ಮಂದಿರ ಪ್ರೌಢಶಾಲೆಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶನಿವಾರ ಏರ್ಪಡಿಸಿದ್ದ ‘ವಿಶ್ವ ನ್ಯೂಮೋನಿಯಾ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ನ್ಯೂಮೋನಿಯಾ ಜ್ವರ ಶ್ವಾಸಕೋಶಕ್ಕೆ ಸಂಬಂಧಿಸಿದ ಸಾಂಕ್ರಾಮಿಕ ಕಾಯಿಲೆಯಾಗಿರುತ್ತದೆ. ಇದು ಎಲ್ಲಾ ವಯೋಮಾನದವರಲ್ಲಿ ಕಂಡುಬರುತ್ತದೆ. ವಿಶೇಷವಾಗಿ ಮಕ್ಕಳಲ್ಲಿ ಮತ್ತು ವಯೋವೃದ್ಧರಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಿರುವುದುರಿಂದ ಹೆಚ್ಚು ಬಾಧಿಸುತ್ತದೆ. ಆಗ ಶ್ವಾಸಕೋಶದಲ್ಲಿ ಬ್ಯಾಕ್ಟರೀಯಾ, ವೈರಸ್, ಶೀಲಿಂಧ್ರ ಅಥವಾ ಇನ್ನಾವುದೇ ರೋಗಾಣುಗಳಿಂದ ಸೊಂಕು ತಗುಲಿ ನ್ಯೂಮೋನಿಯಾ ಉಂಟಾಗುತ್ತದೆ ಎಂದರು.
ನ್ಯೂಮೋನಿಯಾ ಖಾಯಿಲೆಯು ರೋಗಗ್ರಸ್ಥ ವ್ಯಕ್ತಿ ಸೀನಿದಾಗ, ಕೆಮ್ಮಿದಾಗ, ಆತನು ಬಳಸಿದ ಬಟ್ಟೆ,ತಟ್ಟೆ, ಬಟ್ಟಲು, ಲೋಟ, ಚಮಚ, ಕರವಸ್ತ್ರ, ಟವೆಲ್, ಉಡುಪುಗಳನ್ನು ಬಳಸಿದಾಗ ಇತರರಿಗೆ ಹರಡುತ್ತದೆ. ನ್ಯೂಮೋನಿಯಾಕ್ಕೆ ಚಿಕಿತ್ಸೆಯ ಮೂಲಕ ನಿವಾರಿಸಿಕೊಳ್ಳಬಹುದಾಗಿದೆ. ಸ್ವಚ್ಛವಾಗಿ ಕೈತೊಳೆಯುವುದು, ರೋಗಿಗಳಿಂದ ದೂರವಿರುವುದು, ಆರಂಭಿಕ ಹಂತದಲ್ಲಿಯೇ ಖಾಯಿಲೆಯನ್ನು ಗುರ್ತಿಸಿ ಚಿಕಿತ್ಸೆ ಪಡೆಯುವ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ ಎಂದು ಹೇಳಿದರು
ಕಾರ್ಯಕ್ರಮದಲ್ಲಿ ಪ್ರಮುಖರಾದ ಎಚ್.ಬಿ.ಪಾಟೀಲ, ಚನ್ನಬಸಪ್ಪ ಗಾರಂಪಳ್ಳಿ, ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖಿ, ಶಿವಯೋಗಪ್ಪ ಬಿರಾದಾರ ಬಾಳ್ಳಿ, ಬಸವರಾಜ ಎಸ್.ಪುರಾಣೆ ಸೇರಿದಂತೆ ಮತ್ತಿತರರಿದ್ದರು.