ನ್ಯೂಮೋಕಾಕಲ್ ಕಾಂಜುಗೇಟ್ ಲಸಿಕೆ ಉದ್ಘಾಟನೆ


ಗದಗ, ನ 13: ಜಿಲ್ಲೆಯಾದ್ಯಂತ 1 ವರ್ಷದೊಳಗಿನ ಮಕ್ಕಳಿಗೆ ನ್ಯೂಮೋಕಾಕಲ್ ಕಾಂಜುಗೇಟ್ (ಪಿಸಿವಿ) ಲಸಿಕೆಯ ಉದ್ಘಾಟನಾ ಕಾರ್ಯಕ್ರಮವು ಡಿ.ಎಮ್.ಮಾನ್ವಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಗದಗದಲ್ಲಿ ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್. ಇವರ ಅಧ್ಯಕ್ಷತೆಯಲ್ಲಿ ಜರುಗಿತು.
ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಭರತ್ ಎಸ್ ಅವರು ಮಾತನಾಡಿ ಭಾರತ, ಪಾಕಿಸ್ತಾನ, ಚೀನಾ,ನೈಜೇರಿಯಾ,ಇಥೀಯೋಪಿಯಾಮೊದಲಾದ ದೇಶಗಳಲ್ಲಿ ನ್ಯೂಮೋನಿಯಾ ಖಾಯಿಲೆಯಿಂದ ಹೆಚ್ಚು ಮಕ್ಕಳು ಬಳಲುತ್ತಿದ್ದು ವಿಶ್ವದಲ್ಲಿ ಪ್ರತಿ 1000ಕ್ಕೆ 71 ಮಕ್ಕಳು ನ್ಯೂಮೋನಿಯಾ ರೋಗದಿಂದ ಬಳಲುತ್ತಿದ್ದಾರೆ. ಭಾರತದಲ್ಲಿ 800000 ಅಧಿಕ ಮಕ್ಕಳು ಈ ಖಾಯಿಲೆಯಿಂದ ಬಳಲುತ್ತಿದ್ದು, ಶೇ. 15% ರಷ್ಟು ಮಕ್ಕಳು ಈ ಖಾಯಿಲೆಯಿಂದ ಸಾವನ್ನಪ್ಪುತ್ತಿವೆ. ಅದಕ್ಕಾಗಿ 2019ರಲ್ಲಿ ಎಲ್ಲರಿಗೂ ಆರೋಗ್ಯ ಆರೋಗ್ಯಪೂರ್ಣ ಶ್ವಾಸಕೋಶ (ಹೆಲ್ತಿ ಲಂಗ್ಸ ಫಾರ್ ಆಲ್) ಘೋಷಿಸಿದ್ದು, ಮಕ್ಕಳಲ್ಲಿ ಕಾಣಿಸಿಕೊಳ್ಳುವ ಈ ಅಪಾಯಕಾರಿ ನ್ಯೂಮೋನಿಯಾ ಬ್ಯಾಕ್ಟೀರಿಯಾದಿಂದ ರಕ್ಷಿಸಲು ಈ ಲಸಿಕೆಯನ್ನು ಕಡ್ಡಾಯವಾಗಿ ಮಕ್ಕಳಿಗೆ ಹಾಕಿಸಲು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ|| ಜಗದೀಶ ನುಚ್ಚಿನ ಈ ಲಸಿಕೆಯ ಕುರಿತು ತಾಯಂದಿರಿಗೆ ಜಾಗೃತಿ ಮೂಡಿಸಿದರು.ಡಾ|| ಬಿ.ಎಮ್.ಗೊಜನೂರ ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿಗಳು ಈ ಲಸಿಕೆ ಹಾಕುವುದರಿಂದ ನ್ಯೂಮೋಕಾಕಲ್ ನ್ಯೂಮೋನಿಯಾದಿಂದ ಮಕ್ಕಳನ್ನು ರಕ್ಷಿಸಲು ಸಾರ್ವಜನಿಕ ಲಸಿಕಾ ಕಾರ್ಯಕ್ರಮದಲ್ಲಿ ಪಿ.ಸಿ.ವಿ. ಲಸಿಕೆಯನ್ನು ಉಚಿತವಾಗಿ ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ನೀಡಲಾಗುತ್ತದೆ. ಮೊದಲನೇ ಡೋಸನ್ನು 1 1/2 ತಿಂಗಳು, ಎರಡನೇ ಡೋಸನ್ನು 3 1/2 ತಿಂಗಳು, ವರ್ಧಕ ಡೋಸನ್ನು 9 ತಿಂಗಳಿಗೆ ನೀಡಿ ಮಗುವನ್ನು ಮಾರಣಾಂತಿಕ ಕಾಯಿಲೆಯಿಂದ ರಕ್ಷಿಸಲು ತಿಳಿಸಿದರು. ಎಲ್ಲಾ ಆರೋಗ್ಯ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.