ನ್ಯೂಮೊಕಾಕಲ್ ಲಸಿಕೆ ಹಾಕಿಸಿ ನವಜಾತ ಶಿಶು ರಕ್ಷಿಸಿ

  ಚಿತ್ರದುರ್ಗ. ನ.೧೨; ತಾಲ್ಲೂಕಿನ ಬೆಳಗಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪಿಯ ಕೂನುಬೇವು ಉಪಕೇಂದ್ರದ ಹುಣಸೇಕಟ್ಟೆ ಗ್ರಾಮದಲ್ಲಿ  ಸಾಮಾನ್ಯ ಲಸಿಕೆ ಕಾರ್ಯಕ್ರಮದಲ್ಲಿ  ಇಂದು ನೂತನ ಲಸಿಕೆಯಾದ ನ್ಯೂಮೋಕಾಕಲ್ ಕಾಂಜುಗೆಂಟ್ ಲಸಿಕೆಯನ್ನು ಮಕ್ಕಳಿಗೆ ನೀಡುವುದರ ಮೂಲಕ ಚಾಲನೆ ನೀಡಲಾಯಿತು.
ಈ ಕುರಿತು ಮಾಹಿತಿ ನೀಡಿದ ಆರೋಗ್ಯ ನಿರೀಕ್ಷಣಾಧಿಕಾರಿ ಡಿ.ಮಹೇಶ್ ಮಾತನಾಡಿ “ಮಕ್ಕಳಲ್ಲಿ ಕಂಡುಬರುವ ನ್ಯೂಮೊನಿಯಾ ರೋಗಕ್ಕೆ ವ್ಯಾಕ್ಸಿನ್ ಕಂಡುಹಿಡಿಯುವ ದಿಕ್ಕಿನಲ್ಲಿ ಭಾರತ ಬಹುದೊಡ್ಡ ಯಶಸ್ಸನ್ನು ಸಾಧಿಸಿದೆ. ನ್ಯೂಮೋನಿಯಾ ಕಾಯಿಲೆಯಿಂದ ವಿಶ್ವಾದ್ಯಂತ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಅಪಾಯ ಎದುರಾಗುತ್ತದೆ. 2018 ರಲ್ಲಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನಲ್ಲಿಯೇ ಈ ಕಾಯಿಲೆಯಿಂದ ಸುಮಾರು 67,800 ಮಕ್ಕಳು ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಮಕ್ಕಳನ್ನು ರಕ್ಷಿಸಲು ಈ ವ್ಯಾಕ್ಸಿನ್ ಪರಿಣಾಮಕಾರಿ ಸಾಬೀತಾಗಲಿದೆ ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ಭಾರತಿ ಕಟ್ಟೀಮನಿ, ಗ್ರಾಮದ ಶ್ರೀ ಶಕ್ತಿ ಮಹಿಳಾ ಸ್ವ ಸಹಾಯ ಸಂಘದ ಮಮತ, ವೆಂಕಟೇಶ, ಅಶಾ ಕಾರ್ಯಕರ್ತೆಯರಾದ ರೇಖಾ, ಸತ್ಯಮ್ಮ, ಗರ್ಭಿಣಿಯರು, ಮಕ್ಕಳ ತಾಯಂದಿರು , ಇತರರು ಭಾಗವಹಿಸಿದ್ದರು.