ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ 372 ರನ್‌ಗಳ ಭರ್ಜರಿ ಗೆಲುವು

ಮುಂಬೈ,ಡಿ.೬- ಇಲ್ಲಿನ ಗ್ರೀನ್‌ಪಾರ್ಕ್ ಕ್ರೀಡಾಂಗಣದಲ್ಲಿ ಇಂದು ಮುಕ್ತಾಯಗೊಂಡ ನ್ಯೂಜಿಲೆಂಡ್ ವಿರುದ್ಧದ ೨ನೇ ಟೆಸ್ಟ್ ಪಂದ್ಯದಲ್ಲಿ ೩೭೨ ರನ್‌ಗಳ ಭಾರಿ ಅಂತರದಿಂದ ಭಾರತ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ ೧-೦ ಅಂತರದಿಂದ ವಿರಾಟ್‌ಕೊಹ್ಲಿ ಪಡೆ ಸರಣಿ ಕೈವಶ ಮಾಡಿಕೊಂಡಿದೆ.
ಕಾನ್ಪುರದಲ್ಲಿ ನಡೆದ ಮೊದಲನೇ ಪಂದ್ಯದಲ್ಲಿ ಗೆಲುವಿನ ಸಮೀಪಕ್ಕೆ ಬಂದಿದ್ದ ಭಾರತ, ಕೊನೆ ವಿಕೆಟ್ ಪಡೆಯಲಾರದೆ ಮೊದಲ ಟೆಸ್ಟ್ ರೋಚಕ ಡ್ರಾ ನಲ್ಲಿ ಅಂತ್ಯಕಂಡಿತ್ತು.
ಆದರೆ, ೨ನೇ ಟೆಸ್ಟ್‌ನಲ್ಲಿ ಇನ್ನೂ ಒಂದು ದಿನ ಆಟ ಬಾಕಿ ಇರುವಾಗಲೇ ಭಾರತ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಶ್ರೇಷ್ಠ ಪ್ರದರ್ಶನ ನೀಡುವ ಮೂಲಕ ವಿಶ್ವಚಾಂಪಿಯನ್ ನ್ಯೂಜಿಲೆಂಡ್ ತಂಡವನ್ನು ಮಣಿಸುವಲ್ಲಿ ಸಫಲವಾಯಿತು.
೫೪೦ ರನ್‌ಗಳ ಬೃಹತ್ ಗುರಿಯ ಸವಾಲನ್ನು ಎದುರಿಸಬೇಕಾದ ಒತ್ತಡಕ್ಕೆ ಸಿಲುಕಿದ್ದ ಕಿವೀಸ್ ನಿನ್ನೆಯ ಆಟ ಅಂತ್ಯಗೊಂಡಾಗ ೧೪೦ ರನ್‌ಗಳಿಗೆ ೫ ವಿಕೆಟ್ ಕಳೆದುಕೊಂಡು ಸೋಲಿನ ದವಡೆಗೆ ಸಿಲುಕಿತ್ತು.
ಇಂದು ೪ನೇ ದಿನದ ಅಟ ಆರಂಭಿಸಿದ ನ್ಯೂಜಿಲೆಂಡ್ ೨೭ ರನ್ ಗಳಿಸುವಷ್ಟರಲ್ಲಿ ಉಳಿದ ೫ ವಿಕೆಟ್‌ಗಳನ್ನು ಕಳೆದುಕೊಂಡು ಹೀನಾಯ ಸೋಲಿಗೆ ಶರಣಾಯಿತು.
೨ನೇ ಇನ್ನಿಂಗ್ಸ್‌ನಲ್ಲಿ ಆರ್. ಅಶ್ವಿನ್ ಮತ್ತು ಜಯಂತ್ ಯಾದವ್ ಬೌಲಿಂಗ್ ದಾಳಿಗೆ ನ್ಯೂಜಿಲೆಂಡ್ ಆಟಗಾರರು ತರಗೆಲೆಗಳಂತೆ ಉದುರಿ ವಿಕೆಟ್ ಒಪ್ಪಿಸಿ ಪೆವಿಲಿಯನತ್ತ ತೆರಳಿದರು.
ಡರೆಲ್ ಮಿಚಿಲ್ ೬೦, ಹೆನ್ರಿನಿಕೋಲಸ್ ೪೪ ರನ್ ಗಳಿಸಿದ್ದನ್ನೊರತುಪಡಿಸಿದ್ದರೆ ಉಳಿದ ಆಟಗಾರರು ಭಾರತದ ಬೌಲಿಂಗ್ ದಾಳಿಗೆ ಸಮರ್ಥ ಉತ್ತರ ನೀಡಲು ತಿಣುಕಾಡಿದರು.
೨ನೇ ಇನ್ನಿಂಗ್ಸ್‌ನಲ್ಲಿ ಭಾರತದ ಪರ ಆರ್. ಅಶ್ವಿನ್, ಜಯಂತ್ ಯಾದವ್ ತಲಾ ೪ ವಿಕೆಟ್ ಪಡೆದರೆ, ಅಕ್ಷರ್ ಪಟೇಲ್ ತಲಾ ೧ ವಿಕೆಟ್ ಪಡೆದರು.
ಮೊದಲನೆ ಇನ್ನಿಂಗ್ಸ್‌ನಲ್ಲೂ ನ್ಯೂಜಿಲೆಂಡ್ ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿ ಕೇವಲ ೬೨ ರನ್‌ಗಳಿಗೆ ಸರ್ವಪತನ ಕಂಡಿತ್ತು. ಅಶ್ವಿನ್ ಮೊದಲ ಇನ್ನಿಂಗ್ಸ್‌ನಲ್ಲೂ ೪ ವಿಕೆಟ್ ಕಬಳಿಸಿ ಪ್ರವಾಸಿ ತಂಡದ ಕುಸಿತಕ್ಕೆ ಮುನ್ನುಡಿ ಬರೆದಿದ್ದರು.
ನ್ಯೂಜಿಲೆಂಡ್ ಪರ ಅಜಾಜ್ ಪಟೇಲ್ ಒಂದು ಇನ್ನಿಂಗ್ಸ್‌ನಲ್ಲಿ ೧೦ ವಿಕೆಟ್ ಪಡೆದು ದಾಖಲೆ ನಿರ್ಮಿಸಿದ್ದರು. ಆದರೆ, ಈ ಸಂಭ್ರಮ ನ್ಯೂಜಿಲೆಂಡ್ ಪಾಳಯದಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ.
ಭಾರತದ ಸ್ಪಿನ್ ಬೌಲರ್ ಆರ್. ಅಶ್ವಿನ್ ನ್ಯೂಜಿಲೆಂಡ್ ಬ್ಯಾಟರ್‌ಗಳನ್ನು ೨ ಇನ್ನಿಂಗ್ಸ್‌ನಲ್ಲಿ ಇನ್ನಿಲ್ಲದಂತೆ ಕಾಡಿದರು. ಇದರ ಪರಿಣಾಮವಾಗಿ ೮ ವಿಕೆಟ್‌ಗಳನ್ನು ಗಳಿಸಿದರು.
ಶುಕ್ರವಾರ ಆರಂಭವಾದ ಪಂದ್ಯದಲ್ಲಿ ಭಾರತದ ಪರ ಕನ್ನಡಿಗ ಮಯಾಂಕ್ ಅಗರ್‌ವಾಲ್ ಆಕರ್ಷಕ ೧೫೦ ರನ್ ಹಾಗೂ ೨ನೇ ಇನ್ನಿಂಗ್ಸ್‌ನಲ್ಲೂ ಅರ್ಧ ಶತಕ ಬಾರಿಸಿ ತಂಡ ಉತ್ತಮ ಮೊತ್ತ ದಾಖಲಿಸಲು ಪ್ರಮುಖಪಾತ್ರ ವಹಿಸಿ
ದ್ದರು. ಇದರ ಜತೆಗೆ ಅಕ್ಷರ್‌ಪಟೇಲ್ ೫೨ ಮತ್ತು ಶುಭ್‌ಮನ್‌ಗಿಲ್ ೪೨ ರನ್ ಗಳಿಸಿದ್ದರು.
ಒಟ್ಟಾರೆ ೨ನೇ ಟೆಸ್ಟ್ ಪಂದ್ಯದಲ್ಲಿ ಕಿವೀಸ್‌ಗಳ ಮೇಲೆ ಭಾರತ ಸವಾರಿ ಮಾಡಿ ೧೭೨ ರನ್‌ಗಳ ಭರ್ಜರಿ ಗೆಲುವು ಸಾಧಿಸಿತು. ಈ ಮೂಲಕ ನ್ಯೂಜಿಲೆಂಡ್ ವಿರುದ್ಧ ಟಿ-೨೦ ಹಾಗೂ ಏಕದಿನ ಸರಣಿಯನ್ನು ತನ್ನದಾಗಿಸಿಕೊಂಡಿತು.
ಭಾರತ ಮೊದಲ ಇನ್ನಿಂಗ್ಸ್ ೩೨೫,
೨ನೇ ಇನ್ನಿಂಗ್ಸ್ ೭ ವಿಕೆಟ್ ನಷ್ಟಕ್ಕೆ ೨೭೬ಕ್ಕೆ ಡಿಕ್ಲೇರ್
ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್ ೬೨
೨ನೇ ಇನ್ನಿಂಗ್ಸ್ ೧೬೭