ನ್ಯುಮೋನಿಯಾ, ಮೆನಿಂಜೈಟಿಸ್ ಕಾಯಿಲೆಗಳಿಂದ ಮಕ್ಕಳನ್ನು ರಕ್ಷಿಸಿ – ಡಾ.ಅವಿನಾಶ್ ಮೆನನ್

ರಾಯಚೂರು.ನ.೧೨- ನ್ಯುಮೋಕಾಕಸ್ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುವ ನ್ಯುಮೋನಿಯಾ ಮತ್ತು ಮೆನಿಂಜೈಟಿಸ್ ಕಾಯಿಲೆಗಳಿಂದ ಚಿಕ್ಕ ಮಕ್ಕಳನ್ನು ರಕ್ಷಿಸಲು ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಪ್ರಮಾಣಿಕವಾಗಿ ಕೆಲಸ ಮಾಡಬೇಕೆಂದು ಜಿಲ್ಲಾಧಿಕಾರಿ ಡಾ.ಅವಿನಾಶ್ ರಾಜೇಂದ್ರ ಮೆನನ್ ಹೇಳಿದರು.
ಅವರಿಂದು ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿಯ ಕೃಷ್ಣಾ ಸಭಾಂಗಣದಲ್ಲಿ ನ್ಯುಮೊಕಾಕಲ್ ಕಾಂಜುಗೇಟ್ ಲಸಿಕೆ (ಪಿಸಿವಿ) ಗೆ ಚಾಲನೆ ನೀಡಿ ಮಾತನಾಡಿದರು. ಐದು ವರ್ಷದೊಳಗಿನ ಮಕ್ಕಳಲ್ಲಿ ಉಂಟಾಗುವ ನ್ಯುಮೋನಿಯಾಕ್ಕೆ ನ್ಯೂಮೋಕಾಕಸ್ ಬ್ಯಾಕ್ಟೀರಿಯಾ ಪ್ರಮುಖ ಕಾರಣವಾಗಿದೆ. ಆದ್ದರಿಂದ ಮಗು ಒಂದೂವರೆ, ಮೂರೂವರೆ ಮತ್ತು ಒಂಬತ್ತು ತಿಂಗಳಲ್ಲಿದ್ದಾಗ ಪಿವಿಸಿ ಲಸಿಕೆಯ ಮೂರೂ ಡೋಸ್‌ಗಳನ್ನು ಹಾಕಿಸಬೇಕೆಂದರು. ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿ ಪಿಸಿವಿ ಉಚಿತವಾಗಿ ನೀಡಲಾಗುತ್ತಿದೆ. ಪೋಷಕರು ಜವಾಬ್ದಾರಿಯಿಂದ ತಮ್ಮ ಮಕ್ಕಳಿಗೆ ಈ ಲಸಿಕೆ ಹಾಕಿಸಬೇಕೆಂದು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸೀಫ್ ಅವರು ಮಾತಮಾಡುತ್ತಾ, ಸಫ್ಟಪಿಕಲ್ ನ್ಯುಮೋನಿಯಾ ಎಂಬ ಬ್ಯಾಕ್ಟೀರಿಯಾದಿಂದ ಹರಡುವಂತಹ ರೋಗವಾಗಿದ್ದು, ದೇಶದಲ್ಲಿ ಒಟ್ಟು ಮೃತಪಡುವ ೫ ವರ್ಷದೊಳಗಿನ ಮಕ್ಕಳಲ್ಲಿ ಶೇ. ೧೬ ರಷ್ಟು ನ್ಯುಮೋನಿಯಾದಿಂದ ಮರಣ ಹೊಂದುತ್ತಿದ್ದಾರೆ. ಈ ರೋಗ ತಡೆಗಟ್ಟುವ ನಿಟ್ಟಿನಲ್ಲಿ ನ್ಯೂಮೋಕಾಕಲ್ ಕಾಂಜುಗೇಟ್ ಲಸಿಕೆ (ಪಿಸಿವಿ) ಯನ್ನು ಮುಂಜಾಗ್ರತಾ ಕ್ರಮವಾಗಿ ದೇಶದಾದ್ಯಂತ ನೀಡಲಾಗುತ್ತಿದೆಂದರು.
ಈ ಸಂದರ್ಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರ ಡಾ.ನಾಗರಾಜ, ಜಿಲ್ಲಾ ರೋಗವಾಹಕ ಆಶ್ರಿತ ರೋಗ ನಿಯಂತ್ರಣ ಅಧಿಕಾರಿ ಡಾ.ಗಣೇಶ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಸುರೇಂದ್ರ ಬಾಬು, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ನಾರಾಯಣಪ್ಪ, ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ.ನಂದಿತ, ತಾಲೂಕು ಆರೋಗ್ಯ ಅಧಿಕಾರಿ ಡಾ.ಶಾಕೀರ್, ಶಿಶು ಅಭಿವೃದ್ಧಿ ಅಧಿಕಾರಿ ರಾಮಕೃಷ್ಣ ಸೇರಿದಂತೆ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ, ಅಂಗನವಾಡಿ ಮೇಲ್ವಿಚಾರಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.