ನ್ಯಾ. ಸದಾಶಿವ ವರದಿ ಜಾರಿ ಬೇಡ

ದಸಂಸ ಬೃಹತ್ ಪ್ರತಿಭಟನೆ
ಬೆಂಗಳೂರು, ಜ.೧೦- ಸದಾಶಿವ ಆಯೋಗದ ವರದಿ ಬಡಜನರ ಮೀಸಲಾತಿಗೆ ವಿರೋಧಿ ಮಾತ್ರವಲ್ಲದೆ, ಅವೈಜ್ಞಾನಿಕವಾಗಿದೆ. ಹೀಗಾಗಿ, ಕೇಂದ್ರ ಹಾಗೂ ರಾಜ್ಯ ಸರಕಾರ ಯಾವುದೇ ಕಾರಣಕ್ಕೂ ವರದಿಯನ್ನು ಜಾರಿಗೊಳಿಸದೆ, ಈ ಕೂಡಲೇ ವರದಿಯನ್ನು ತಿರಸ್ಕಾರ ಮಾಡುವಂತೆ ಆಗ್ರಹಿಸಿ ವಿವಿಧ ಸಮದಾಯದ ಮುಖಂಡರು ಬೃಹತ್ ಕಾಲ್ನಾಡಿಗೆ ಜಾಥಾ ನಡೆಸಿದರು.ನಗರದಲ್ಲಿಂದು ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ನೇತೃತ್ವದಲ್ಲಿ ಮೆಜೆಸ್ಟಿಕ್ ಬಳಿ ಜಮಾಯಿಸಿದ ಸಾವಿರಾರು ಮಂದಿ ಕಾಲ್ನಡಿಗೆ ಮೂಲಕ ಜಾಥಾ ನಡೆಸಿ ಫ್ರೀಡಂಪಾರ್ಕ್ ಮೈದಾನದಲ್ಲಿ ಸಮಾವೇಶಗೊಂಡರು. ಈ ವೇಳೆ ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗವನ್ನ ತಿರಸ್ಕಾರ ಮಾಡುವಂತೆ ಘೋಷಣೆ ಕೂಗಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.ಸಂವಿಧಾನದ ಮೈಲಿ ಶೋಷಿತ ಸಮುದಾಯಗಳಿಗೆ ನೀಡಿರುವ ಸೌಲಭ್ಯಗಳನ್ನು ಕೆಲ ಬಲಾಢ್ಯ ಶೋಷಿತ ಸಮುದಾಯಗಳು ಕಬಳಿಸಿದ್ದಾರೆ. ಅನೇಕ ಅಲ್ಪಸಂಖ್ಯಾತ ಶೋಷಿತ ಸಮುದಾಯಗಳಿಗೆ ಸಾಕಷ್ಟು ಅನ್ಯಾಯವಾಗುತ್ತಿವೆ. ಇಂತಹದರಲ್ಲಿ ಎಸ್ಸಿ ಸಮುದಾಯದ ಮೀಸಲಾತಿಯಿಂದ ಭೋವಿ, ಬಂಜಾರ, ಕೊರಚ ಸೇರಿದಂತೆ ೫೧ ಜಾತಿಗಳನ್ನು ಕೈ ಬಿಡುವಂತೆ ಸದಾಶಿವ ಆಯೋಗದಲ್ಲಿ ಮಾಹಿತಿಯಿದೆ. ಹಾಗಾಗಿ ನ್ಯಾಯಮೂರ್ತಿ ಎಜೆ ಸದಾಶಿವ ಆಯೋಗವನ್ನ ಯಾವುದೇ ಕಾರಣಕ್ಕೂ ಜಾರಿ ಮಾಡದೆ, ತಿರಸ್ಕಾರ ಮಾಡುವಂತೆ ೧೦೦ಕ್ಕೂ ಹೆಚ್ಚು ಸಮುದಾಯಗಳ ಮುಖಂಡರು ಆಗ್ರಹಿಸಿದರು.
ಇದೇ ವೇಳೆ ಅಖಿಲ ಕರ್ನಾಟಕ ಕುಳುವ ಮಹಾಸಂಘ (ಕೊರಮ ಕೊರಚ ಕೊರವ ಸಮುದಾಯಗಳ ಒಕ್ಕೂಟ) ಅಧ್ಯಕ್ಷ ಶಿವಾನಂದ ಎಂ.ಭಜಂತ್ರಿ ಮಾತನಾಡಿ, ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರೋತ್ತರದ ಮೊದಲ ಪರಿಶಿಷ್ಟ ಜಾತಿ ಮೀಸಲಾತಿ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಕೆಲವು ಪರಿಶಿಷ್ಟ ಜಾತಿಗಳನ್ನು ಪಟ್ಟಿಯಿಂದ ಕೈಬಿಡುತ್ತಿರುವುದು ಕಾನೂನು ಬಾಹಿರ. ಈ ಕೂಡಲೇ ಸರ್ಕಾರ ತನ್ನ ನಿಲುವಿನಿಂದ ಹಿಂದೆ ಸರಿಯಬೇಕೆಂದು ಒತ್ತಾಯಿಸಿದರು.
ಅಲೆಮಾರಿ ಕೊರಮ ಕೊರಚ ಸೇರಿದಂತೆ ಹಲವಾರು ಜಾತಿಗಳ ಜನತೆ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಹೀಗಾಗಿ ಸರ್ಕಾರ ಮೊದಲು ಪರಿಶಿಷ್ಟರ ಔದ್ಯೋಗಿಕ ಸ್ಥಿತಿಗತಿ ಮತ್ತು ಜನಾಂಗದ ವಸ್ತುನಿಷ್ಠ ಸ್ಥಿತಿಗತಿ ಕುರಿತು ಅಧ್ಯಯನ ಕೈಗೊಳ್ಳಬೇಕು ಎಂದ ಅವರು,ಇನ್ನೂ, ಕೊರಮ, ಕೊರಚ ಹಾಗೂ ಬೋವಿ ಮತ್ತು ಲಂಬಾಣಿ ಸಮುದಾಯಗಳು ಆಯೋಗದ ವರದಿಯಿಂದ ಸಂಕಷ್ಟಕ್ಕೆ ಸಿಲುಕಲಿವೆ.

ಸರ್ಕಾರ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಬಲಾಢ್ಯರಾಗಿರುವವರನ್ನು ಓಲೈಸಲು ಮುಂದಾಗಿದೆ. ನಿಜವಾಗಿ ದೊರೆಯಬೇಕಾದ ಸಮುದಾಯಗಳಿಗೆ ಮೀಸಲಾತಿ ವಂಚಿಸುತ್ತಿದೆ. ಇದು ಸರಿಯಲ್ಲ ಎಂದರು.ನ್ಯಾ.ಸದಾಶಿವ ಆಯೋಗದ ವರದಿ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿರುವುದು ಸ್ಪಷ್ಟವಾಗಿದೆ. ಈ ಬಗ್ಗೆ ಸಾರ್ವಜನಿಕ ಚರ್ಚೆಗೆ ಅವಕಾಶ ನೀಡದೇ ಬಿಜೆಪಿ ಸರ್ಕಾರ ಏಕಪಕ್ಷೀಯವಾಗಿ ಕೇಂದ್ರಕ್ಕೆ ಶಿಫಾರಸ್ಸು ಮಾಡುವ ಪ್ರಯತ್ನದಲ್ಲಿ ತೊಡಗಿರುವುದು ಸರಿಯಲ್ಲ.ಪರಿಶಿಷ್ಟರಲ್ಲಿ ಒಳಮೀಸಲಿಗೆ ಕೇಂದ್ರ, ರಾಜ್ಯ ಸರ್ಕಾರ ಅಥವಾ ನ್ಯಾಯಾಲಯಕ್ಕಾಗಲೀ ಅವಕಾಶ ಇಲ್ಲ ಎಂದು ಉಲ್ಲೇಖಿಸಿದರು.ಈ ಬೃಹತ್ ಜಾಥಾದಲ್ಲಿ ಭೋವಿ ಮಠಾಧೀಶ ಇಮ್ಮಡಿ ಸಿದ್ಧರಾಮರ ಸ್ವಾಮೀಜಿ, ಬಂಜಾರ ಸಮಾಜದ ಮಠಾಧೀಶರು ಒಕ್ಕೂಟದ ಗೌರವಾಧ್ಯಕ್ಷ ಚಂದ್ರಣ್ಣ, ರಾಜ್ಯ ಪ್ರಧಾನ ಕಾರ್ಯ ಕಾರ್ಯದರ್ಶಿ ಆನಂದ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.

ಸಾಲು ಸಾಲಾಗಿ ನಿಂತ ವಾಹನಗಳು..!
ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ನೇತೃತ್ವದಲ್ಲಿ ಇಲ್ಲಿನ ಮೆಜೆಸ್ಟಿಕ್‌ನಿಂದ ಫ್ರೀಡಂ ಪಾರ್ಕಿನವರೆಗೂ ಬೃಹತ್ ಕಾಲ್ನಡಿಗೆ ಜಾಥಾ ನಡೆಸಿದ ಪರಿಣಾಮ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಬಿಸಿ ತಟ್ಟಿತು.
ಕೆಆರ್ ವೃತ್ತ, ಸಂಗೊಳ್ಳಿರಾಯಣ್ಣ ವೃತ್ತ, ಮೈಸೂರ್ ಬ್ಯಾಂಕ್ ಸರ್ಕಲ್, ಶಿವನಾಂದ ವೃತ್ತ ಸೇರಿದಂತೆ ವಿವಿಧೆಡೆ ವಾಹನಗಳು ರಸ್ತೆಗಳಲ್ಲಿಯೇ ಸಾಲು ಸಾಲಾಗಿ ನಿಂತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಇನ್ನೂ, ಹೆಚ್ಚಿನ ಸಂಖ್ಯೆಯಲ್ಲಿ ಜಾಥಾ ನಡೆಸಿದ ಹಿನ್ನೆಲೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.