
ದಾವಣಗೆರೆ. ಜ.೯; ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕೆಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ನಗರದ ಅಂಬೇಡ್ಕರ್ ವೃತ್ತದಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಪ್ರತಿಭಟನೆ ನಡೆಸಿದರು.ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಜನಪರ ಸಂಘಟನೆಗಳೆಲ್ಲಾ ಒಂದಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿಯಾಗಬೇಕೆಂದು ಹೋರಾಟ ಮಾಡಿದ್ದರ ಪರಿಣಾಮ ಈ ಹಿಂದಿನ ಧರ್ಮಸಿಂಗ್ ನೇತೃತ್ವದ ಸರ್ಕಾರ ಒಂದು ಆಯೋಗವನ್ನು ರಚನೆ ಮಾಡಿ ಆ ಆಯೋಗದ ಅಧ್ಯಕ್ಷರನ್ನಾಗಿ ನ್ಯಾಯಮೂರ್ತಿ ಎ ಜೆ ಸದಾಶಿವರವರನ್ನು ನೇಮಕ ಮಾಡಿತ್ತು. ನ್ಯಾಯಮೂರ್ತಿ ಸದಾಶಿವರವರು ಏಳು ವರ್ಷಕ್ಕೂ ಹೆಚ್ಚುಕಾಲ ಪರಿಶಿಷ್ಟ ಜಾತಿಗಳ ಸಾಮಾಜಿಕ ಶೈಕ್ಷಣಿಕ ಮತ್ತು ಉದ್ಯೋಗದ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿ 2012ರಲ್ಲಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿತ್ತು. ವರದಿ ಸಲ್ಲಿಕೆಯಾಗಿ 10 ವರ್ಷಗಳೇ ಕಳೆದರೂ ಸಹ ಯಾವ ಸರ್ಕಾರಗಳೂ ಕೂಡ ವರದಿಯನ್ನು ಅಂಗೀಕರಿಸಿ, ಕೇಂದ್ರಕ್ಕೆ ಕಳುಹಿಸಿರುವುದಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿಗಾಗಿ ಸಲ್ಲಿಸಿರುವ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಸರ್ಕಾರ ತಕ್ಷಣವೇ ಅಂಗೀಕರಿಸಿ 341(3)ತಿದ್ದುಪಡಿ ಮಾಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕು. ಬೇತೂರು ಗ್ರಾ.ಪಂ.ಚಾಯಿತಿಗೆ ಸೇರಿದ ಸರ್ವೆ ನಂ. 170 ರ ವಿಸ್ತೀರ್ಣ ಸುಮಾರು 8 ಎಕರೆ 20 ಗುಂಟೆ ಗೋಮಾಳ ಜಾಗದಲ್ಲಿ ಬಿ.ಚಿತ್ತಾನಹಳ್ಳಿ ಹಾಗೂ ಕಲ್ಪನಹಳ್ಳಿ ಯಲ್ಲಿ ವಾಸವಾಗಿರುವ ನಿವೇಶನ ರಹಿತ ಪರಿಶಿಷ್ಟ ಜಾತಿಯ ಬಡ ಕುಟುಂಬದವರಿಗೆ ನಿವೇಶನ ಮಂಜೂರು ಮಾಡಿ ಹಕ್ಕು ಪತ್ರ ನೀಡಬೇಕು. ಗೋಣಿವಾಡ ಸರ್ವೇ ನಂ : 40/2 ರಲ್ಲಿ ದೇವರ ಹೆಸರಿಗೆ ಹರಾಜು ಮಾಡಿರುವ ಜಮೀನನ್ನು ಸುಮಾರು 70 ವರ್ಷಗಳಿಂದ ದಲಿತ ಕುಟುಂಬಗಳು ಉಳುಮೆ ಮಾಡಿ ಕೊಂಡು ಬರುತ್ತಿದ್ದು ಈ ಜಾಗವನ್ನು ಸ್ಮಶಾನಕ್ಕೆ ನೀಡಲಾಗಿದೆ ಎನ್ನುತ್ತಿದ್ದು ಈ ಕೂಡಲೆ ವಜಾ ಗೊಳಿಸಿ ದಲಿತ ಕುಟುಂಬಗಳಿಗೆ ಖಾತೆ ಮತ್ತು ಪಹಣಿ ನೀಡಬೇಕು ಎಂಬ ವಿವಿಧ ಬೇಡಿಕೆಗಳ ಈಡೇರಿಕೆಗೆ ಪ್ರತಿಭಟನಾಕಾರರು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕ ಕುಂದುವಾಡ ಮಂಜುನಾಥ್, ಲಿಂಗರಾಜು ಎಂ,ಅಣಜಿ ಹನುಮಂತಪ್ಪ, ಪ್ರದೀಪ್,ಮಂಜುನಾಥ್ ಸೇರಿದಂತೆ ಅನೇಕರಿದ್ದರು.